ADVERTISEMENT

ಠೇವಣಿ ವಿಮೆ ಮಸೂದೆ ವಾಪಸ್?

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 18:43 IST
Last Updated 18 ಜುಲೈ 2018, 18:43 IST
   

ನವದೆಹಲಿ (ಪಿಟಿಐ): ತೀವ್ರ ವಿವಾದಕ್ಕೆ ಕಾರಣವಾಗಿದ್ದ ‘ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ’ಯನ್ನು (ಎಫ್‌ಆರ್‌ಡಿಐ) ಕೇಂದ್ರ ಸರ್ಕಾರ ವಾಪಸ್ ಪಡೆಯುವ ಸಾಧ್ಯತೆ ಇದೆ.

ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಠೇವಣಿದಾರರ ಹಣವನ್ನೇ ಬಳಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಿದ್ದ ಮಸೂದೆಯಲ್ಲಿನ ‘ಬೇಲ್‌ ಇನ್‌’ ಪ್ರಸ್ತಾವಕ್ಕೆ ತೀವ್ರ ಆಕ್ಷೇಪ ಕೇಳಿ ಬಂದಿತ್ತು. ಈ ಕಾರಣಕ್ಕೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಸದನದಲ್ಲಿ ಮಂಡಿಸಿದ್ದ ಮಸೂದೆಯಲ್ಲಿನ ಈ ವಿವಾದಾತ್ಮಕ ಪ್ರಸ್ತಾವದಿಂದಾಗಿ ಗ್ರಾಹಕರ ಬ್ಯಾಂಕ್‌ ಠೇವಣಿಗಳ ಸುರಕ್ಷತೆಗೆ ತೀವ್ರ ಧಕ್ಕೆ ಒದಗಲಿದೆ ಎನ್ನುವ ಆತಂಕ ಕೇಳಿಬಂದಿತ್ತು.

ADVERTISEMENT

ಠೇವಣಿದಾರರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹಣಕಾಸು ಸಚಿವ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಭರವಸೆ ನೀಡಿದ್ದರೂ, ಬ್ಯಾಂಕಿಂಗ್‌ ವಲಯ ಮತ್ತು ರಾಜಕಾರಣಿಗಳಿಂದಲೂ ಈ ಪ್ರಸ್ತಾವಕ್ಕೆ ಕಳವಳವ್ಯಕ್ತವಾಗಿತ್ತು. ಈ ಎಲ್ಲ ಕಾರಣಗಳಿಗೆ ಸರ್ಕಾರ ಈ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಯ ಪರಿಶೀಲನೆಗೆ ಒಪ್ಪಿಸಿತ್ತು. ಈ ಸಮಿತಿಯು ಈ ಅಧಿವೇಶನದ ಕೊನೆಯ ದಿನ ತನ್ನ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.