ADVERTISEMENT

ಉಜ್ವಲ ಫಲಾನುಭವಿಗಳಿಗೆ 3 ಎಲ್‌ಪಿಜಿ ಸಿಲಿಂಡರ್ ಉಚಿತ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 19:30 IST
Last Updated 1 ಏಪ್ರಿಲ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಪ್ರಧಾನಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಎಲ್ಲ ಬಳಕೆದಾರರು ಏಪ್ರಿಲ್‌ನಿಂದ ಜೂನ್‌ವರೆಗೆ ಮೂರು ಎಲ್‌ಪಿಜಿ (ಅಡುಗೆ ಅನಿಲ) ರೀಫಿಲ್‌ ಸಿಲಿಂಡರ್‌ಗಳನ್ನು ಉಚಿತವಾಗಿ ಪಡೆಯಲಿದ್ದಾರೆ.

ಈ ಯೋಜನೆಯ 8 ಕೋಟಿಗೂ ಅಧಿಕ ಫಲಾನುಭವಿಗಳು 14.2 ಕೆ.ಜಿ. ತೂಕದ ಮೂರು ಎಲ್‌ಪಿಜಿ ಸಿಲಿಂಡರ್ ಪಡೆಯಲು ಅರ್ಹರಾಗಿರುತ್ತಾರೆ. ಏಪ್ರಿಲ್‌ನಲ್ಲಿ ಸಿಲಿಂಡರ್ ಖರೀದಿ ವೆಚ್ಚ ಭರಿಸಲು ಚಿಲ್ಲರೆ ಮಾರಾಟದ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ‘ಪಿಎಂಯುವೈ’ ಗ್ರಾಹಕರು ಪ್ರತಿ ತಿಂಗಳೂ ಒಂದು ಸಿಲಿಂಡರ್ ಪಡೆಯಲು ಅರ್ಹರಾಗಿರುತ್ತಾರೆ.

ಫಲಾನುಭವಿಗಳು ಮುಂದಿನ ರೀಫಿಲ್‌ ಸಿಲಿಂಡರ್ ಅನ್ನು ಹಿಂದಿನ ಸಿಲಿಂಡರ್ ಸ್ವೀಕರಿಸಿದ 15 ದಿನಗಳ ನಂತರವಷ್ಟೇ ಬುಕ್ ಮಾಡಬಹುದು.

ADVERTISEMENT

ಒಂದು ವೇಳೆ, ಗ್ರಾಹಕರು ಈ ಮೂರು ತಿಂಗಳುಗಳ ಅವಧಿಯಲ್ಲಿ ರೀಫಿಲ್‌ ಸಿಲಿಂಡರ್ ಪಡೆಯದಿದ್ದಲ್ಲಿ, ಅವರು ಈ ಮುಂಗಡ ಹಣವನ್ನು 2021ರ ಮಾರ್ಚ್ 31ರವರೆಗೆ ಸಿಲಿಂಡರ್ ಪಡೆಯಲು ಬಳಸಬಹುದಾಗಿದೆ. ಈ ಸೌಲಭ್ಯವು ಒಟಿಪಿ ಆಧಾರಿತವಾಗಿದ್ದು, ನಗದು ಮೆಮೊಗೆ ಸಹಿ ಮತ್ತು ಪುಸ್ತಕದಲ್ಲಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ದಾಸ್ತಾನು ಕೊರತೆ ಇಲ್ಲ: ರಾಜ್ಯದಲ್ಲಿ ಎಲ್‌ಪಿಜಿ ದಾಸ್ತಾನು ಕೊರತೆ ಇಲ್ಲ. ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ ಪಡೆಯಲು ಧಾವಂತ ಪಡಬಾರದು. ವಿತರಕರ ಮಳಿಗೆ ಮತ್ತು ಗೋದಾಮುಗಳಿಗೆ ಧಾವಿಸಬಾರದು ಎಂದೂ ‘ಐಒಸಿ’ ಮನವಿ ಮಾಡಿಕೊಂಡಿದೆ.

‘ಕೊರೊನಾ–2’ ವೈರಸ್‌ ಹಾವಳಿ ಹಿನ್ನೆಲೆಯಲ್ಲಿ ನೋಟುಗಳ ಚಲಾವಣೆಗೆ ಕಡಿವಾಣ ಹಾಕಿ ನಗದುರಹಿತ (ಡಿಜಿಟಲ್) ರೂಪದಲ್ಲಿ ಹಣ ಪಾವತಿಸವಂತೆ ಗ್ರಾಹಕರನ್ನು ಉತ್ತೇಜಿಸಲಾಗುತ್ತದೆ. ಎಲ್‌ಪಿಜಿ ತುರ್ತು ಸಹಾಯವಾಣಿ ಸಂಖ್ಯೆ 1906 ಕಾರ್ಯನಿರ್ವಹಣೆಯಲ್ಲಿ ಇರುತ್ತದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.