ನವದೆಹಲಿ: ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ ಅನುಷ್ಠಾನಗೊಳ್ಳುವ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವೇನಲ್ಲಿ ಖಾಸಗಿ ವಾಹನಗಳು ಶುಲ್ಕ ಪಾವತಿಸದೆ ಪ್ರತಿದಿನ 20 ಕಿ.ಮೀ.ವರೆಗೆ ಸಂಚರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅವಕಾಶ ಕಲ್ಪಿಸಿದೆ.
ಈ ಕುರಿತು ಮಂಗಳವಾರ ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ನಿಯಮಗಳು 2008ಕ್ಕೆ ತಿದ್ದುಪಡಿ ತಂದಿದೆ. ಇದರಿಂದ ಹೆದ್ದಾರಿ ಬದಿಯ ಗ್ರಾಮಗಳ ವಾಹನ ಚಾಲಕರಿಗೆ ಅನುಕೂಲವಾಗಲಿದೆ.
ಹೊಸ ನಿಯಮಾವಳಿ ಪ್ರಕಾರ, ಖಾಸಗಿ ವಾಹನ ಚಾಲಕರು ರಾಷ್ಟ್ರೀಯ ಹೆದ್ದಾರಿ, ಬೈಪಾಸ್ ಅಥವಾ ಸುರಂಗ ಮಾರ್ಗದಲ್ಲಿ ನಿಗದಿಪಡಿಸಿರುವ ದೂರದವರೆಗೆ ಉಚಿತವಾಗಿ ಸಂಚರಿಸಬಹುದಾಗಿದೆ.
ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಮತ್ತು ಹರಿಯಾಣದ ಪಾಣಿಪತ್–ಹಿಸಾರ್ ರಾಷ್ಟ್ರೀಯ ಹೆದ್ದಾರಿ 709ರಲ್ಲಿ ಟೋಲ್ ಪ್ಲಾಜಾಗಳ ಬದಲಾಗಿ ಪ್ರಾಯೋಗಿಕವಾಗಿ ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೊಳಿಸಲು ಸಚಿವಾಲಯ ನಿರ್ಧರಿಸಿದೆ.
ಫಾಸ್ಟ್ಯಾಗ್ ವ್ಯವಸ್ಥೆ ಬಳಸಿಕೊಂಡೇ ಜಿಎನ್‌ಎಸ್‌ಎಸ್–ಇಟಿಸಿ ವ್ಯವಸ್ಥೆಯು ಅನುಷ್ಠಾನಗೊಳ್ಳಲಿದೆ. ಕೆಲವು ದಿನಗಳವರೆಗೆ ಹಾಲಿ ಇರುವ ಆರ್‌ಎಫ್‌ಐಡಿ– ಇಟಿಸಿ (ರೇಡಿಯೊ ಪ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಮತ್ತು ಹೊಸ ವ್ಯವಸ್ಥೆ ಎರಡೂ ಜಾರಿಯಲ್ಲಿ ಇರುತ್ತವೆ.
ಬಳಿಕ ದೇಶದ ಆಯ್ದ ಹೆದ್ದಾರಿಗಳಲ್ಲಿ ಹಂತ ಹಂತವಾಗಿ ಜಿಎನ್‌ಎಸ್ಎಸ್ (ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ) ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ) ಅನುಷ್ಠಾನಗೊಳಿಸುವುದಾಗಿ ತಿಳಿಸಿದೆ.
ಶುಲ್ಕ ನಿಗದಿ ಹೇಗೆ?
ಜಿಎನ್‌ಎಸ್‌ಎಸ್ ಸಕ್ರಿಯಗೊಳಿಸಿದ ಆನ್ ಬೋರ್ಡ್ ಯೂನಿಟ್‌ಗಳನ್ನು (ಒಬಿಯು) ಹೊಂದಿದ ವಾಹನಗಳಿಗೆ ಅವು ಹೆದ್ದಾರಿಯಲ್ಲಿ ಪ್ರಯಾಣಿಸುವ ದೂರ ಆಧರಿಸಿ ಶುಲ್ಕ ವಿಧಿಸಲಾಗುತ್ತದೆ. ಮೊದಲ 20 ಕಿ.ಮೀ.ವರೆಗೆ ಯಾವುದೇ ಶುಲ್ಕ ಇರುವುದಿಲ್ಲ.
ವಾಹನಕ್ಕೆ ಒಬಿಯು ಅಳವಡಿಸಿಕೊಂಡರೆ ಹೆದ್ದಾರಿಯಲ್ಲಿನ ಸಂಚಾರದ ಬಗ್ಗೆ ಟ್ರ್ಯಾಕ್ ಮಾಡಿ ಉಪಗ್ರಹಕ್ಕೆ ಮಾಹಿತಿ ರವಾನಿಸಲಿದೆ. ನೀವು ಎಷ್ಟು ದೂರ ಸಂಚರಿಸಿದ್ದೀರಿ ಎಂಬುದನ್ನು ಜಿಎನ್‌ಎಸ್‌ಎಸ್ ಲೆಕ್ಕ ಹಾಕಲಿದೆ.
ಆದರೆ, ಜಿಎನ್‌ಎಸ್‌ಎಸ್ ಸಕ್ರಿಯಗೊಳಿಸಿದ ಆನ್ ಬೋರ್ಡ್ ಯೂನಿಟ್‌ಗಳನ್ನು ಹೊಂದಿಲ್ಲದಿರುವ ವಾಹನಗಳ ಚಾಲಕರು ಟೋಲ್ ಪ್ಲಾಜಾದಲ್ಲಿ ನೇರವಾಗಿ ಅಥವಾ ಆರ್‌ಎಫ್‌ಐಡಿ–ಇಟಿಸಿ ಮೂಲಕ ಶುಲ್ಕ ಪಾವತಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.