ಮುಂಬೈ: ಕಾರ್ಪೊರೇಟ್ ವಲಯದಲ್ಲಿನ ಹೊಸ ಬಂಡವಾಳ ಹೂಡಿಕೆಯು ದೇಶದ ಮುಂದಿನ ಹಂತದ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಸಿಕ ವರದಿ ಹೇಳಿದೆ.
ಅಲ್ಲದೇ, ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ದೇಶದ ಸುಸ್ಥಿರ ಆರ್ಥಿಕತೆ ಬೆಳವಣಿಗೆಯ ವಿಸ್ತರಣೆಗೆ ತಳಹದಿಯಾಗಲಿದೆ ಎಂದು ‘ಭಾರತದ ಆರ್ಥಿಕತೆ’ ಕುರಿತ ಲೇಖನದಲ್ಲಿ ಹೇಳಲಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ ಎದುರಾದ ಆರ್ಥಿಕ ಅಪಾಯಗಳನ್ನು ಸಮತೋಲಿತವಾಗಿ ನಿಭಾಯಿಸಲಾಗಿದೆ. ಹಾಗಾಗಿ, ಪ್ರಸಕ್ತ ವರ್ಷದಲ್ಲಿ ಜಾಗತಿಕ ಆರ್ಥಿಕತೆಯು ನಿರೀಕ್ಷಿತ ಅಂದಾಜಿಗಿಂತಲೂ ಹೆಚ್ಚಿನ ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ.
ದೇಶದ ಆರ್ಥಿಕತೆಯು 2023–24ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ದಾಖಲಿಸಿದ್ದ ಬೆಳವಣಿಗೆಯೇ ದ್ವಿತೀಯಾರ್ದದಲ್ಲೂ ಮುಂದುವರಿದಿದೆ. ಈ ವರ್ಷದಲ್ಲಿ ಖಾಸಗಿ ವಲಯದಲ್ಲಿನ ಹೂಡಿಕೆಯ ಸಕಾರಾತ್ಮಕವಾಗಿ ಇರಲಿದೆ ಎಂದು ಹೇಳಿದೆ.
2023ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ದೇಶದ ಪ್ರಮುಖ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ₹2.4 ಲಕ್ಷ ಕೋಟಿ ಸಾಲ ನೀಡಿವೆ. 2022ನೇ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಸಾಲ ನೀಡಿಕೆಯಲ್ಲಿ ಶೇ 23ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದೆ.
2024–25ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.
ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಏರಿಕೆಯಾಗಿತ್ತು. ಪ್ರಸಕ್ತ ವರ್ಷದ ಜನವರಿಯಲ್ಲಿ ಇಳಿಕೆಯಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
2024–25ನೇ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.5ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.