ನವದೆಹಲಿ: ಹಾಲು ಹಾಗೂ ಹಾಲಿನ ಉತ್ಪನ್ನಗಳ ಪ್ಯಾಕೆಟ್ ಮೇಲೆ ‘ಎ1’ ಮತ್ತು ‘ಎ2’ ಮಾದರಿ ಉತ್ಪನ್ನ ಎಂಬುದಾಗಿ ಲೇಬಲ್ ಅಂಟಿಸುವುದು ಗ್ರಾಹಕರನ್ನು ದಿಕ್ಕು ತಪ್ಪಿಸುತ್ತದೆ. ಹಾಗಾಗಿ, ಇ–ಕಾಮರ್ಸ್ ಕಂಪನಿಗಳು ಹಾಗೂ ಆಹಾರ ಪದಾರ್ಥ ಮಾರಾಟಗಾರರು ಈ ಲೇಬಲ್‌ಗಳನ್ನು ತೆಗೆದು ಹಾಕಬೇಕು ಎಂದು ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿರ್ದೇಶನ ನೀಡಿದೆ.
ಈ ಮಾದರಿಯಡಿ ಉತ್ಪನ್ನಗಳ ವರ್ಗೀಕರಣಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿ ಅವಕಾಶವಿಲ್ಲ ಎಂದು ಹೇಳಿದೆ.
ಹಸು, ಎಮ್ಮೆ ಹಾಲಿನಲ್ಲಿರುವ ಪ್ರಮುಖ ಪ್ರೋಟಿನ್‌ಗಳಲ್ಲಿ ಗಿಣ್ಣು (ಕೇಸಿನ್) ಒಂದಾಗಿದೆ. ಹಾಲಿನಲ್ಲಿರುವ ಬೀಟಾ ಕೇಸಿನ್ ಪ್ರೋಟಿನ್ ಬಗ್ಗೆ ತಪಾಸಣೆ ನಡೆಸಲಾಗಿದೆ. ‘ಎ1’ ಮತ್ತು ‘ಎ2’ ಲೇಬಲ್ ಅಂಟಿಸಿರುವ ಹಾಲಿನಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದೆ.
ಇ–ಕಾಮರ್ಸ್ ಕಂಪನಿಗಳು ತಮ್ಮ ವೆಬ್‌ಸೈಟ್‌ನಿಂದಲೂ ಈ ಮಾಹಿತಿಯನ್ನು ತೆಗೆದು ಹಾಕಬೇಕು ಎಂದು ಸೂಚಿಸಿದೆ.
‘ಪ್ರಾಧಿಕಾರದ ಆದೇಶವು ಸ್ವಾಗತಾರ್ಹವಾಗಿದೆ. ಹಾಲು ಮತ್ತು ಅದರ ಉತ್ಪನ್ನಗಳ ಮೇಲೆ ಈ ಮಾದರಿಯ ಲೇಬಲ್ ಅಂಟಿಸುವುದು ಮಾರುಕಟ್ಟೆಯ ತಂತ್ರವಾಗಿದೆ’ ಎಂದು ಪರಾಗ್ ಮಿಲ್ಕ್ ಫುಡ್ಸ್ ಮುಖ್ಯಸ್ಥ ದೇವೇಂದ್ರ ಶಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.