ADVERTISEMENT

ಡೀಸೆಲ್‌ ವಾಹನಗಳ ಖರೀದಿ ಮೇಲೆ ಬೀಳಲಿದೆಯೇ ಹೆಚ್ಚುವರಿ ಶೇ 10ರಷ್ಟು ತೆರಿಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2023, 9:03 IST
Last Updated 12 ಸೆಪ್ಟೆಂಬರ್ 2023, 9:03 IST
<div class="paragraphs"><p> ನಿತಿನ್ ಗಡ್ಕರಿ </p></div>

ನಿತಿನ್ ಗಡ್ಕರಿ

   

ಪಿಟಿಐ ಚಿತ್ರ

ನವದೆಹಲಿ: ‘ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಡೀಸೆಲ್ ವಾಹನ ಖರೀದಿ ಮೇಲೆ ಜಿಎಸ್‌ಟಿ ಮಾದರಿಯಲ್ಲೇ ಮಾಲಿನ್ಯ ತೆರಿಗೆ ಎಂದು ಶೇ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುವುದು’ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಭಾರತೀಯ ವಾಹನ ತಯಾರಕರ ಸಮಿತಿಯ 63ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಾಗರಿಕರ ಮೇಲೆ ಹೆಚ್ಚುತ್ತಿರುವ ವಾಯು ಮಾಲಿನ್ಯದ ಕುರಿತು ಕಳವಳ ವ್ಯಕ್ತಪಡಿಸಿ ಈ ನಿರ್ಧಾರ ಪ್ರಕಟಿಸಿದ್ದರು ಎಂದು ಏಜೆನ್ಸಿಗಳು ವರದಿ ಮಾಡಿದ್ದವು.

‘ಹೆಚ್ಚುವರಿ ಶೇ 10ರಷ್ಟು ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯಲಿದ್ದೇನೆ. ಬಹುತೇಕ ರಾಷ್ಟ್ರಗಳಲ್ಲಿ ಡೀಸೆಲ್ ವಾಹನಗಳ ಮೇಲೆ ಇಂಥ ತೆರಿಗೆ ವಿಧಿಸಲಾಗುತ್ತಿದೆ’ ಎಂದರು.

ಆದರೆ ಇದು ಸುದ್ದಿಯಾಗುತ್ತಿದ್ದಂತೆ ಗಡ್ಕರಿ ಟ್ವೀಟ್ ಮಾಡಿದ್ದು, ಅಂಥ ಯಾವುದೇ ಪ್ರಸ್ತಾಪ ಕೇಂದ್ರದಿ ಮುಂದಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘2070ರ ಹೊತ್ತಿಗೆ ಶೂನ್ಯ ಇಂಗಾಲದ ಗುರಿಗೆ ಕೇಂದ್ರ ಬದ್ಧವಾಗಿದೆ. ಮಾಲಿನ್ಯಕ್ಕೆ ಕಾರಣವಾಗಿರುವ ಡೀಸೆಲ್‌ ವಾಹನಗಳು ಮತ್ತು ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ಪರಿಗಣಿಸಿ ಪರ್ಯಾಯ ಹಾಗೂ ಪರಿಸರ ಸ್ನೇಹಿ ಇಂಧನ ಮೂಲ ಹುಡುಕುವ ಅಗತ್ಯವಿದೆ. ಇವುಗಳನ್ನು ಆಮದು ಮಾಡಿಕೊಳ್ಳಬೇಕಾಗಬಹುದು. ಅದು ಆರ್ಥಿಕವಾಗಿಯೂ ಹೊರಯಾಗಬಾರದು ಮತ್ತು ಪರಿಸರಕ್ಕೂ ಹಾನಿ ಮಾಡಬಾರದು’ ಎಂದಿದ್ದಾರೆ.

‘ಕಾರುಗಳ ವಿಭಾಗದಲ್ಲಿ ಮಾರುತಿ ಸುಜುಕಿ ಮತ್ತು ಹೊಂಡಾ ಕಂಪನಿಗಳು ಈಗಾಗಲೇ ಡೀಸೆಲ್ ಕಾರುಗಳ ತಯಾರಿಕೆಯನ್ನು ಸ್ಥಗಿತಗೊಳಿಸಿವೆ. ಜತೆಗೆ ಭಾರತದಲ್ಲಿ ಡೀಸೆಲ್ ಕಾರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗೆಯೇ ತಯಾರಿಕರೂ ಡೀಸೆಲ್ ಕಾರುಗಳ ಮಾರಾಟವನ್ನು ತಗ್ಗಿಸುವ ಅಗತ್ಯವಿದೆ’ ಎಂದು ಗಡ್ಕರಿ ಹೇಳಿದ್ದಾರೆ ಎಂದು ವರದಿಯಾಗಿತ್ತು.

‘ಪರಿಸರಕ್ಕೆ ಡೀಸೆಲ್ ಮಾರಕ. ಹೀಗಾಗಿ ಪರ್ಯಾಯ ಇಂಧನದ ಬೇಡಿಕೆಯನ್ನು ಪೂರೈಸಲು ಆಮದು ಮಾಡುವ ಅಗತ್ಯವಿದೆ. ಹೀಗಾಗಿ ಪರಿಸರ ಸ್ನೇಹಿ ಇಂಧನಗಳತ್ತ ಕೈಗಾರಿಕೆಗಳು ಮುಖ ಮಾಡುವ ಅಗತ್ಯವಿದೆ’ ಎಂದರು.

ಸದ್ಯ ವಾಹನಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ಇದೆ. ಜತೆಗೆ ಶೇ 1ರಿಂದ ಶೇ 22ರಷ್ಟು ಹೆಚ್ಚುವರಿ ಸೆಸ್‌ ವಿಧಿಸಲಾಗುತ್ತದೆ. ಇದು ವಾಹನಗಳ ಮಾದರಿಯನ್ನು ಅವಲಂಬಿಸಿರುತ್ತದೆ. ಎಸ್‌ಯುವಿಗಳ ಮೇಲೆ ಅತ್ಯಧಿಕ ಶೇ 28ರಷ್ಟು ತೆರಿಗೆ ಮತ್ತು ಪರಿಹಾರ ಸೆಸ್‌ ಆಗಿ ಶೇ 22ರಷ್ಟಿದೆ ಎಂದು ಪಿಟಿಐ ವರದಿ ಮಾಡಿದೆ.

ಗಡ್ಕರಿ ಅವರಿಂದ ಈ ಹೇಳಿಕೆ ಹೊರಬೀಳುತ್ತಲೇ ಟಾಟಾ ಮೋಟಾರ್ಸ್‌, ಮಹೀಂದ್ರ ಮತ್ತು ಅಶೋಕ್ ಲೇಲ್ಯಾಂಡ್ ಕಂಪನಿಯ ಷೇರುಗಳು ಶೇ 2.5ರಿಂದ ಶೇ 4ರಷ್ಟು ಕುಸಿತ ಕಂಡಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.