ಬೆಂಗಳೂರು: ರಾಜ್ಯದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ ಬೆಳ್ಳುಳ್ಳಿ ಧಾರಣೆಯು ₹400 ದಾಟಿದೆ.
ಫೆಬ್ರುವರಿಯಲ್ಲಿ ಬೆಳ್ಳುಳ್ಳಿ ದರವು ₹500 ದಾಟಿತ್ತು. ಪ್ರಸಕ್ತ ವರ್ಷದಲ್ಲಿ ಸತತ ಎರಡನೇ ಸಲ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈಗ ಹಬ್ಬದ ಋತು ಆರಂಭಗೊಂಡಿದೆ. ಮದುವೆ, ಸಭೆ, ಸಮಾರಂಭಗಳು ಹೆಚ್ಚಾಗಿ ನಡೆಯುವ ಕಾರಣ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಲಿದ್ದು, ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯ ಪೈಕಿ ಮಧ್ಯಪ್ರದೇಶದ ಪಾಲು ಶೇ 70ರಷ್ಟಿದೆ. ಉಳಿದಂತೆ ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ರೈತರು ಬೆಳ್ಳುಳ್ಳಿ ಬೆಳೆಯುತ್ತಾರೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಅತಿಹೆಚ್ಚು ಪ್ರಮಾಣದಲ್ಲಿ ಕರ್ನಾಟಕಕ್ಕೆ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಆದರೆ, ಭಾರಿ ಮಳೆಯಿಂದಾಗಿ ಈ ಎರಡೂ ರಾಜ್ಯಗಳಲ್ಲಿ ಉತ್ಪಾದನೆಯು ಕುಸಿತ ಕಂಡಿದೆ. ಹಾಗಾಗಿ, ಮಾರುಕಟ್ಟೆಗೆ ಆವಕ ಕಡಿಮೆಯಾಗಿದ್ದು, ದರ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಮೊದಲು ಪ್ರತಿದಿನ 5 ಸಾವಿರದಿಂದ 6 ಸಾವಿರ ಚೀಲ (ಪ್ರತಿ ಚೀಲ 50 ಕೆ.ಜಿ) ಆವಕವಾಗುತ್ತಿತ್ತು. ಸದ್ಯ 3 ಸಾವಿರ ಚೀಲ ಆವಕವಾಗುತ್ತಿದೆ. ಇಲ್ಲಿಂದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರಿಗೂ ರವಾನೆಯಾಗುತ್ತದೆ. ಬೆಂಗಳೂರಿನ ಗಡಿ ಭಾಗದಲ್ಲಿ ಇರುವ ತಮಿಳುನಾಡಿನ ಹೊಸೂರು ಸೇರಿ ಹಲವು ಪ್ರದೇಶಗಳಿಗೂ ಇಲ್ಲಿಂದಲೇ ಪೂರೈಕೆಯಾಗುತ್ತದೆ.
ಮಧ್ಯಪ್ರದೇಶದಿಂದ ಸದ್ಯ ಪೂರೈಕೆಯಾಗುತ್ತಿರುವ ಬೆಳ್ಳುಳ್ಳಿಯು ಬೆಂಗಳೂರು ನಗರದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ವ್ಯಾಪಾರಿಗಳು ವಿವರಿಸುತ್ತಾರೆ.
‘ಮಧ್ಯಪ್ರದೇಶದಲ್ಲಿ ವ್ಯಾಪಾರಿಗಳ ಬಳಿ ಬೆಳ್ಳುಳ್ಳಿ ದಾಸ್ತಾನಿಲ್ಲ. ರೈತರ ಬಳಿ ದಾಸ್ತಾನು ಇದೆ. ಅವರು ಮಾರುಕಟ್ಟೆಯಲ್ಲಿನ ಬೆಲೆಯ ಸ್ಥಿತಿಗತಿ ಅವಲೋಕಿಸಿ ಮಾರಾಟ ಮಾಡುತ್ತಾರೆ. ಈಗ ಬಿತ್ತನೆ ಮಾಡಿರುವ ಬೆಳ್ಳುಳ್ಳಿಯು ಮುಂದಿನ ವರ್ಷದ ಜನವರಿಗೆ ಕಟಾವಿಗೆ ಬರಲಿದೆ. ಹಾಗಾಗಿ, ಮುಂಬರುವ ತಿಂಗಳುಗಳಲ್ಲಿ ಧಾರಣೆಯು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಬೆಂಗಳೂರಿನ ಗುಜರಾತ್ ಟ್ರೇಡರ್ಸ್‌ನ ವರ್ತಕ ಜುಬೇರ್ ಹೇಳುತ್ತಾರೆ.
‘ಚೀನಾದಿಂದ ಭಾರತಕ್ಕೆ ಅಕ್ರಮವಾಗಿ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ಆದರೆ, ಇದು ಗುಣಮಟ್ಟದಿಂದ ಕೂಡಿಲ್ಲ. ಗ್ರಾಹಕರು ಇದನ್ನು ಖರೀದಿಸುವುದು ಕಡಿಮೆ’ ಎನ್ನುತ್ತಾರೆ.
‘ಮಂಗಳವಾರದಂದು ಯಶವಂತಪುರದ ಮಾರುಕಟ್ಟೆಯಲ್ಲಿ ‘ಎ’ ದರ್ಜೆಯ ಹೈಬ್ರೀಡ್ ಬೆಳ್ಳುಳ್ಳಿಯ ಸಗಟು ಧಾರಣೆ ಕೆ.ಜಿಗೆ ₹420ಕ್ಕೆ ಮುಟ್ಟಿತ್ತು. ಹಾಗಾಗಿ, ಈ ವಾರದಲ್ಲಿ ಚಿಲ್ಲರೆ ಧಾರಣೆಯು ₹450 ದಾಟುವ ಸಾಧ್ಯತೆಯಿದೆ’ ಎಂದು ವಿವರಿಸುತ್ತಾರೆ.
ಈರುಳ್ಳಿ ದರ ಏರುಗತಿ
ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಮಾರುಕಟ್ಟೆಗೆ ಗುಣಮಟ್ಟದ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಈ ನಡುವೆಯೇ ಮಹಾರಾಷ್ಟ್ರದಿಂದ ಆವಕ ಕಡಿಮೆಯಾಗಿದೆ. ಹಾಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ ಧಾರಣೆಯು ₹52 ದಾಟಿದ್ದರೆ ಸೂಪರ್ ಮಾರ್ಕೆಟ್‌ಗಳಲ್ಲಿ ಕೆ.ಜಿಗೆ ₹80 ಮುಟ್ಟಿದೆ.
‘ಹೊಸದುರ್ಗ ಹಿರಿಯೂರು ಹಗರಿಬೊಮ್ಮನಹಳ್ಳಿ ಕೂಡ್ಲಿಗಿ ಜಗಳೂರು ಹರಪನಹಳ್ಳಿ ಭಾಗದಲ್ಲಿ ಬೆಳೆದಿರುವ ಈರುಳ್ಳಿಯು ಮಳೆಯಿಂದ ಹಾನಿಗೀಡಾಗಿದೆ. ರೈತರು ಅಳಿದುಳಿದ ಈರುಳ್ಳಿಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. ಇದು ಗುಣಮಟ್ಟದಿಂದ ಕೂಡಿಲ್ಲ’ ಎಂದು ಯಶವಂತಪುರ ಎಪಿಎಂಸಿಯ ಈರುಳ್ಳಿ ವರ್ತಕ ಜಿ. ಲೋಕಪ್ಪ ಹೇಳುತ್ತಾರೆ.
‘ಕರ್ನಾಟಕದಲ್ಲಿ ಮಳೆಯಿಂದ ಈರುಳ್ಳಿ ಬೆಳೆ ನಷ್ಟವಾಗಿರುವ ಬಗ್ಗೆ ಮಹಾರಾಷ್ಟ್ರದ ರೈತರು ಮತ್ತು ವರ್ತಕರಿಗೆ ಅರಿವಿದೆ. ಹಾಗಾಗಿ ರಾಜ್ಯಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಮತ್ತಷ್ಟು ಬೆಲೆ ಏರಿಕೆಯಾಗಲಿದೆ ಎಂದು ದಾಸ್ತಾನು ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ’ ಎಂದು ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.