ADVERTISEMENT

ಜಿಡಿಪಿ ಬೆಳವಣಿಗೆ ಶೇ 7ರಷ್ಟು ನಿರೀಕ್ಷೆ

ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 6.7: ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌

ಪಿಟಿಐ
Published 19 ಮೇ 2024, 13:54 IST
Last Updated 19 ಮೇ 2024, 13:54 IST
GDP
GDP   

ನವದೆಹಲಿ: ದೇಶದ ಜಿಡಿಪಿ ಬೆಳವಣಿಗೆ ದರ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 6.7 ಮತ್ತು 2023–24ರ ಹಣಕಾಸು ವರ್ಷದಲ್ಲಿ ಅಂದಾಜು ಶೇ6.9–7ರಷ್ಟು ಇರಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಸಂಸ್ಥೆ ಅಂದಾಜಿಸಿದೆ.

ಹಿಂದಿನ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಶೇ 8.2, ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 8.1 ಮತ್ತು ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 8.4ರಷ್ಟು ಆರ್ಥಿಕತೆ ಬೆಳವಣಿಗೆ ಆಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.7ರಷ್ಟು ಬೆಳವಣಿಗೆ ಮತ್ತು 2023–24ರ ಪೂರ್ಣ ಹಣಕಾಸು ವರ್ಷದಲ್ಲಿ ಒಟ್ಟಾರೆ ಜಿಡಿಪಿ ಬೆಳವಣಿಗೆ ದರ ಶೇ 6.9–7ರಷ್ಟು ಇರಲಿದೆ ಎಂದು ನಿರೀಕ್ಷಿಸಿದ್ದೇವೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸಂಸ್ಥೆಯ ಪ್ರಧಾನ ಆರ್ಥಿಕ ತಜ್ಞ ಸುನಿಲ್‌ ಕುಮಾರ್‌ ಸಿನ್ಹಾ ಹೇಳಿದ್ದಾರೆ.

ಮೊದಲ ಎರಡು ತ್ರೈಮಾಸಿಕದಲ್ಲಿ ಕಡಿಮೆಯಿದ್ದ ಬೆಳವಣಿಗೆ ದರ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್‌–ಡಿಸೆಂಬರ್‌) ಶೇ 8.4ರಷ್ಟಕ್ಕೆ ಏರಿಕೆ ಆಗಿದೆ.

ADVERTISEMENT

ಇದೇ ತ್ರೈಮಾಸಿಕದಲ್ಲಿ ಒಟ್ಟು ಮೌಲ್ಯ ವರ್ಧನೆಯು (ಜಿವಿಎ) ಶೇ 6.5ರಷ್ಟಿದ್ದರೆ, ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರ ಶೇ 8.4ರಷ್ಟು ಇದೆ. ಈ ತ್ರೈಮಾಸಿಕದಲ್ಲಿ ಹೆಚ್ಚಿನ ತೆರಿಗೆಗಳನ್ನು ಸಂಗ್ರಹಿಸಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ಜಿವಿಎ ಮತ್ತು ಜಿಡಿಪಿ ಶೇ 8.2ರಷ್ಟಿದ್ದರೆ, ಎರಡನೇ ತ್ರೈಮಾಸಿಕದಲ್ಲಿ ಜಿವಿಎ ಶೇ 7.7 ಮತ್ತು ಜಿಡಿಪಿ ಶೇ 8.1ರಷ್ಟಿತ್ತು. 

ಜಿಡಿಪಿ ಎನ್ನುವುದು ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪತ್ತಿಯಾಗುವ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವಾಗಿದೆ. ಜಿವಿಎ ಎಂದರೆ ಜಿಡಿಪಿ ಮೈನಸ್ ನಿವ್ವಳ ತೆರಿಗೆಗಳು (ಒಟ್ಟು ತೆರಿಗೆ ಸಂಗ್ರಹದಿಂದ ಸಬ್ಸಿಡಿ ಕಳೆದ ಮೊತ್ತ) ಆಗಿದೆ.

ಏಪ್ರಿಲ್‌ನಲ್ಲಿ ನಡೆದ ಆರ್‌ಬಿಐನ ಹಣಕಾಸು ನೀತಿ ಸಭೆಯಲ್ಲಿ (ಎಂಪಿಸಿ) 2023–24ರ ಹಣಕಾಸು ವರ್ಷದಲ್ಲಿ ಶೇ 7ರಷ್ಟು ಜಿಡಿಪಿ ಬೆಳವಣಿಗೆ ದರ ಇರಲಿದೆ ಎಂದು ಅಂದಾಜಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ 7.1ಕ್ಕೆ ವಿಸ್ತರಿಸುವ ನಿರೀಕ್ಷೆ ಇದೆ ಎಂದು ಸಿನ್ಹಾ ಹೇಳಿದ್ದಾರೆ.

ನಿರ್ಮಾಣ ಮತ್ತು ವಿದ್ಯುತ್‌ ಕ್ಷೇತ್ರವು (ಸೇವಾವಲಯ) ಪ್ರಗತಿ ಕಾಣಲಿದೆ. ಆದರೆ, ಗಣಿಗಾರಿಕೆ ಮತ್ತು ಕೈಗಾರಿಕಾ ಉತ್ಪಾದನೆಯು ಇಳಿಕೆ ಆಗಲಿದೆ. ಭಾರತೀಯ ಹವಾಮಾನ ಇಲಾಖೆ ಅಂದಾಜಿನಂತೆ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮುಂಗಾರು ಆದರೆ, ಗ್ರಾಮೀಣ ಬೇಡಿಕೆ ಹೆಚ್ಚಲಿದೆ. ಇದು ಬಳಕೆಯನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ನಾಲ್ಕನೇ ತ್ರೈಮಾಸಿಕದ (ಜನವರಿ-ಮಾರ್ಚ್ 2024) ಜಿಡಿಪಿ ಸಂಖ್ಯೆಗಳು ಮತ್ತು 2023-24 ಹಣಕಾಸು ವರ್ಷದ ತಾತ್ಕಾಲಿಕ ಅಂದಾಜುಗಳನ್ನು ಸರ್ಕಾರವು ಮೇ 31ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.