ನವದೆಹಲಿ: ದೇಶದ ಜಿಡಿಪಿ ಬೆಳವಣಿಗೆ 2024–25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇ 6.7ರಷ್ಟು ಪ್ರಗತಿ ದಾಖಲಿಸಿದೆ. ಇದು 15 ತಿಂಗಳ ಕನಿಷ್ಠ ಮಟ್ಟವಾಗಿದೆ.
2023-24ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಒಟ್ಟು ದೇಶೀ ಉತ್ಪಾದನೆ (ಜಿಡಿಪಿ) ಶೇ 8.2ರಷ್ಟು ದಾಖಲಾಗಿತ್ತು. ಕೃಷಿ ಮತ್ತು ಸೇವಾ ವಲಯವು ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಕಾಣದಿದ್ದರಿಂದ ಪ್ರಗತಿ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.
ಚೀನಾವು ಜೂನ್ ತ್ರೈಮಾಸಿಕದಲ್ಲಿ ಶೇ 4.7ರಷ್ಟು ಪ್ರಗತಿ ದಾಖಲಿಸಿದೆ; ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ. 2023ರ ಮಾರ್ಚ್ ತ್ರೈಮಾಸಿಕದಲ್ಲಿ ಪ್ರಗತಿ ಶೇ 6.2ರಷ್ಟಿತ್ತು.
ದೇಶದ ಜಿಡಿಪಿ ಬೆಳವಣಿಗೆಯು ಇಳಿಕೆಯಾಗಿದ್ದರೂ, ಈ ಅವಧಿಯಲ್ಲಿ ಒಟ್ಟು ಮೌಲ್ಯ ವರ್ಧನೆಯ (ಜಿವಿಎ) ಬೆಳವಣಿಗೆ ಶೇ 6.8ಕ್ಕೆ ಏರಿಕೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 6.3ರಷ್ಟಿತ್ತು.
ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ದತ್ತಾಂಶದ ಪ್ರಕಾರ, ಕೃಷಿ ವಲಯದ ಬೆಳವಣಿಗೆ ಜಿವಿಎ ಶೇ 3.7ರಿಂದ ಶೇ 2ಕ್ಕೆ ಇಳಿದಿದೆ. ಆದರೆ, ತಯಾರಿಕಾ ವಲಯದಲ್ಲಿ ಶೇ 7 ಮತ್ತು ನಿರ್ಮಾಣ ವಲಯ ಶೇ 10.5ಕ್ಕೆ ಏರಿಕೆಯಾಗಿದೆ.
ಸರ್ಕಾರದ ಬಂಡವಾಳ ವೆಚ್ಚದಲ್ಲಿನ ಇಳಿಕೆ, ಬಿಸಿಗಾಳಿ, ಗ್ರಾಹಕರ ವೆಚ್ಚದಲ್ಲಿನ ಕಡಿಮೆಯಿಂದ ದೇಶವು ಪ್ರಗತಿ ಇಳಿಕೆ ದಾಖಲಿಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.