ನವದೆಹಲಿ: ದೇಶಿ ಆರ್ಥಿಕತೆಯು 2018–19ರ ಹಣಕಾಸು ವರ್ಷದಲ್ಲಿ ಶೇ 7.2ರ ದರದಲ್ಲಿ ವೃದ್ಧಿ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ.
ಇದು ಹಿಂದಿನ ವರ್ಷದ ಶೇ 6.7ಕ್ಕಿಂತ ಹೆಚ್ಚಿಗೆ ಇರಲಿದೆ. ತಯಾರಿಕೆ ಮತ್ತು ಕೃಷಿ ವಲಯಗಳ ಸಾಧನೆಯಲ್ಲಿನ ಸುಧಾರಣೆಯ ಫಲವಾಗಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಹೆಚ್ಚಳ ದಾಖಲಿಸುವ ಸಾಧ್ಯತೆ ಇದೆ ಎಂದು, 2018–19ನೆ ಹಣಕಾಸು ವರ್ಷದ ರಾಷ್ಟ್ರೀಯ ವರಮಾನದ ಮುಂಗಡ ಅಂದಾಜು ಬಿಡುಗಡೆ ಮಾಡಿರುವ ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್‌ಒ) ಸೋಮವಾರ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜಿಸಿರುವ ಶೇ 7.4ರಷ್ಟು ಆರ್ಥಿಕ ವೃದ್ಧಿ ದರಕ್ಕಿಂತ ಇದು ಅಲ್ಪಮಟ್ಟಿಗೆ ಕಡಿಮೆ ಇದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟಾರೆ ಮೌಲ್ಯ ಸೇರ್ಪಡೆಯು (ಜಿವಿಎ) ಶೇ 7ರಷ್ಟು ಇರಲಿದೆ ಎಂದೂ ನಿರೀಕ್ಷಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ (ಶೇ 6.5) ಹೆಚ್ಚಿಗೆ ಇರಲಿದೆ.
ತಯಾರಿಕಾ ವಲಯದ ಬೆಳವಣಿಗೆಯು 2016–17ರಲ್ಲಿನ ಶೇ 5.7ರ ಬದಲಾಗಿ ಶೇ 8.3ರಷ್ಟಕ್ಕೆ ಹೆಚ್ಚಳಗೊಳ್ಳಲಿದೆ. ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯಗಳಲ್ಲಿನ ಚಟುವಟಿಕೆಗಳು ಹಿಂದಿನ ವರ್ಷದ ಶೇ 3.4ಕ್ಕೆ ಹೋಲಿಸಿದರೆ ಈ ಬಾರಿ ಶೇ 3.8ರಷ್ಟಕ್ಕೆ ಏರಿಕೆಯಾಗುವ ಸಾಧ್ಯತೆ ಇರುವುದು ‘ಸಿಎಸ್‌ಒ’ದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ವಿದ್ಯುತ್, ಅನಿಲ, ನೀರು ಪೂರೈಕೆ ಮತ್ತಿತರ ನಾಗರಿಕ ಉಪಯುಕ್ತ ಸೇವೆಗಳ ಬೆಳವಣಿಗೆಯು ಶೇ 7.2ರಿಂದ ಶೇ 9.4ಕ್ಕೆ ಏರಿಕೆಯಾಗಲಿದೆ.
‘ಆರೋಗ್ಯಕರ ಬೆಳವಣಿಗೆ’
‘ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವುಶೇ 7.2ರಷ್ಟು ಇರಲಿದೆ ಎಂದು ಅಂದಾಜಿಸಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ವಿಶ್ಲೇಷಿಸಿದ್ದಾರೆ.
‘ಹಲವಾರು ಕೈಗಾರಿಕೆಗಳು ಗಮನಾರ್ಹ ಬೆಳವಣಿಗೆ ದಾಖಲಿಸಿದ್ದು, ದೇಶಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿವೆ. ವಿಶ್ವದಲ್ಲಿಯೇ ಅತ್ಯಂತ ತ್ವರಿತ ಬೆಳವಣಿಗೆ ದಾಖಲಿಸುತ್ತಿರುವ ಆರ್ಥಿಕತೆ ಎನ್ನುವ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ’ ಎಂದಿದ್ದಾರೆ.
ಹಿಂದಿನ ವರ್ಷ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಆರ್ಥಿಕ ಸಮೀಕ್ಷೆಯಲ್ಲಿ ‘ಜಿಡಿಪಿ’ ದರವು ಶೇ 7ರಿಂದ ಶೇ 7.5ರಷ್ಟು ಇರಲಿದೆ ಎಂದು ಅಂದಾಜಿಸಿತ್ತು.
ವರ್ಷ; ಜಿಡಿಪಿ (%)
2015–16;8.2
2016–17;7.1
2017–18;6.7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.