ಮುಂಬೈ: ದೇಶದಲ್ಲಿ 2023–24ರ ಹಣಕಾಸು ವರ್ಷದಲ್ಲಿ ಹರಳು ಮತ್ತು ಚಿನ್ನಾಭರಣ ರಫ್ತು ಶೇ 12.17ರಷ್ಟು ಇಳಿಕೆ ಕಂಡಿದೆ.
2022–23ರಲ್ಲಿ ₹3 ಲಕ್ಷ ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತಾಗಿತ್ತು. ಅದು ಕಳೆದ ಹಣಕಾಸು ವರ್ಷದಲ್ಲಿ ಒಟ್ಟು ₹2.65 ಲಕ್ಷ ಕೋಟಿಯಷ್ಟು ಆಗಿದೆ. ಅಮೆರಿಕದಲ್ಲಿ ಹೆಚ್ಚಿನ ಬಡ್ಡಿ ದರ ಮತ್ತು ಚೀನಾದ ನಿಧಾನ ಗತಿಯ ಚೇತರಿಕೆಯೇ ಇಳಿಕೆಗೆ ಕಾರಣವಾಗಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ತಿಳಿಸಿದೆ.
ಕಳೆದ ಹಣಕಾಸು ವರ್ಷವು ಎಲ್ಲ ವರ್ಗದ ಉತ್ಪನ್ನಗಳಿಗೆ ಸವಾಲಾಗಿತ್ತು. ಅಮೆರಿಕದಲ್ಲಿ ಹೆಚ್ಚಿನ ಬಡ್ಡಿ ದರ ಮತ್ತು ಕೊರೊನಾ ನಂತರ ಚೀನಾದಲ್ಲಿ ನಿಧಾನಗತಿಯ ಚೇತರಿಕೆ ಭಾರತದ ರಫ್ತು ಇಳಿಕೆಗೆ ಕಾರಣವಾಯಿತು ಎಂದು ಜಿಜೆಇಪಿಸಿ ಅಧ್ಯಕ್ಷ ವಿಪುಲ್ ಶಾ ತಿಳಿಸಿದ್ದಾರೆ.
ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳ ರಫ್ತು ಶೇ 25ರಷ್ಟು ಕುಸಿತವಾಗಿ, ₹1.76 ಲಕ್ಷ ಕೋಟಿಗೆ ಮುಟ್ಟಿದೆ. ಹಿಂದಿನ ಇದೇ ವಧಿಯಲ್ಲಿ ₹1.32 ಲಕ್ಷ ಕೋಟಿ ಆಗಿತ್ತು. ಲ್ಯಾಬ್‌ನಲ್ಲಿ ತಯಾರಿಸಿದ ವಜ್ರಗಳ ರಫ್ತು ಮೌಲ್ಯ ₹13,468 ಕೋಟಿಯಿಂದ ₹11,611 ಕೋಟಿಗೆ ಮುಟ್ಟಿದೆ. ಶೇ 13ರಷ್ಟು ಕುಸಿದಿದೆ.
ಒಟ್ಟು ಚಿನ್ನಾಭರಣಗಳ ರಫ್ತು ಶೇ 20ರಷ್ಟು ಹೆಚ್ಚಳವಾಗಿದ್ದು, ₹76,589 ಕೋಟಿಯಿಂದ ₹92,346 ಕೋಟಿಗೆ ಮುಟ್ಟಿದೆ. ಬೆಳ್ಳಿ ಆಭರಣದ ರಫ್ತು ₹23,556 ಕೋಟಿಯಿಂದ ₹13,406 ಕೋಟಿಗೆ ಕುಸಿತವಾಗಿದೆ ಎಂದು ಜಿಜೆಇಪಿಸಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.