ಫ್ರಾಂಕ್‌ಫರ್ಟ್, ಜರ್ಮನಿ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತ ಮುಂದುವರಿದಿದ್ದು, ಜರ್ಮನ್ ಸಾಫ್ಟ್‌ವೇರ್ ದೈತ್ಯ ಎಸ್‌ಎಪಿ 3,000 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ಗುರುವಾರ ಹೇಳಿದೆ.
ಸಾಫ್ಟ್‌ವೇರ್ ಮತ್ತು ಕ್ಲೌಡ್-ಆಧಾರಿತ ಕಂಪ್ಯೂಟಿಂಗ್ ಸೇವೆಗಳನ್ನು ಒದಗಿಸುವ ಸಂಸ್ಥೆ, ತನ್ನ ಪ್ರಮುಖ ವ್ಯವಹಾರವನ್ನು ಬಲಪಡಿಸಲು ಮತ್ತು ಕಾರ್ಯದಕ್ಷತೆಯನ್ನು ಸುಧಾರಿಸಲು ‘ಉದ್ದೇಶಿತ ಮರುರಚನೆ ಕಾರ್ಯಕ್ರಮ’ ಕೈಗೊಳ್ಳಲು ಯೋಜಿಸಿರುವುದಾಗಿ ತಿಳಿಸಿದೆ.
ಈ ಹೆಜ್ಜೆ ಕಂಪನಿಯ ಸರಿಸುಮಾರು ಶೇ 2.5 ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಕಂಪನಿ ತನ್ನ ತ್ರೈಮಾಸಿಕ ವಹಿವಾಟು ವರದಿ ಪ್ರಕಟಣೆ ವೇಳೆ ಹೇಳಿದೆ.
ಸ್ಯಾಪ್ ವಿಶ್ವದಾದ್ಯಂತ ಸುಮಾರು 1,20,000 ಉದ್ಯೋಗಿಗಳನ್ನು ಹೊಂದಿದೆ. ಸುಮಾರು 3,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಕಂಪನಿ ಮುಂದಾಗಿದೆ.
ಮೆಟಾ, ಅಮೆಜಾನ್, ಗೂಗಲ್, ಐಬಿಎಂ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಈಗಾಗಲೇ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ.
ಕೆಲಸದ ಸ್ವರೂಪದಲ್ಲಿನ ಈ ಮರುರಚನೆಯಿಂದ ವಾರ್ಷಿಕ 300-350 ದಶಲಕ್ಷ ಯುರೋಗಳಷ್ಟು ಉಳಿತಾಯಕ್ಕೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.