ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಮೂರು ದಿನಗಳ ಸಮಾವೇಶವು ಬುಧವಾರದಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಒಟ್ಟು ₹ 5 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಆಕರ್ಷಣೆಯ ಗುರಿಯೊಂದಿಗೆ ನಡೆಯಲಿರುವ ಈ ಸಮಾವೇಶದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
– ಈ ಬಾರಿಯ ಸಮಾವೇಶದ ಮೂಲಕ ಎಷ್ಟು ಹೂಡಿಕೆ ಆಕರ್ಷಿಸುವ ಗುರಿ ಇದೆ?
ಕನಿಷ್ಠ ₹ 5 ಲಕ್ಷ ಕೋಟಿ ಹೂಡಿಕೆ ರಾಜ್ಯಕ್ಕೆ ಬರಲಿದೆ ಎಂಬ ನಿರೀಕ್ಷೆ ಇದೆ. ಇದರಲ್ಲಿ ₹ 2.80 ಲಕ್ಷ ಕೋಟಿ ಹೂಡಿಕೆಗೆ ಒಪ್ಪಂದ (ಎಂಒಯು)ಈಗಾಗಲೇ ಆಗಿದೆ. ಇದು ಈ ಬಾರಿಯ ಸಮಾವೇಶದ ವೈಶಿಷ್ಟ್ಯ. ಇಷ್ಟು ಮೊತ್ತದ ಯೋಜನೆಗಳಿಗೆ ಉನ್ನತಾಧಿಕಾರ ಸಮಿತಿಯು ಅನುಮೋದನೆ ನೀಡಿ ಆಗಿದೆ. ಹಿಂದೆಲ್ಲ ಎಂಒಯು ಆಗುತ್ತಿದ್ದವು. ಆದರೆ, ಒಪ್ಪಂದಗಳು ಕಾರ್ಯರೂಪಕ್ಕೆ ಬರುವುದರ ಪ್ರಮಾಣ ಕಡಿಮೆ ಇತ್ತು.
ಈ ಬಾರಿ ಹಾಗೆ ಆಗಬಾರದು ಎಂಬ ಕಾರಣಕ್ಕೆ ನಾವೇ ಮುಂದಡಿ ಇರಿಸಿದ್ದೇನೆ, ಮೊದಲೇ ಎಂಒಯು ಮಾಡಿಕೊಂಡಿದ್ದೇವೆ. ಕಂಪನಿಗಳಿಂದ ಅವರ ಯೋಜನೆಯ ಬಗ್ಗೆ ವಿಸ್ತೃತವಾದ ವರದಿ ಪಡೆದುಕೊಂಡಿದ್ದೇವೆ, ಹೂಡಿಕೆ ಎಷ್ಟು ಎಂಬುದನ್ನು ತಿಳಿದುಕೊಂಡಿದ್ದೇವೆ. ನಮ್ಮ ಗುರಿಯ ಶೇ 50ಕ್ಕೂ ಹೆಚ್ಚು ತಲುಪಿಯಾಗಿದೆ.
– ಹೆಚ್ಚಿನ ಹೂಡಿಕೆ ಬರಬಹುದಾದ ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಇದೆ. ಹೀಗಿರುವಾಗ ಹೂಡಿಕೆ ಆಕರ್ಷಿಸುವ ಗುರಿ ಈಡೇರುವುದೇ?
ಹಿಂಜರಿತದ ಭೀತಿಯಿಂದ ನಮ್ಮ ಮೇಲೆ ಕೆಟ್ಟ ಪರಿಣಾಮ ಆಗಲಿಕ್ಕಿಲ್ಲ. ಅಮೆರಿಕ ಮತ್ತು ಯುರೋಪಿನಲ್ಲಿ ಹಣದುಬ್ಬರ ಹೆಚ್ಚಾಗಿದೆ, ಆರ್ಥಿಕ ಬೆಳವಣಿಗೆ ಮಂದವಾಗಿದೆ. ಕೋವಿಡ್ ನಂತರದಲ್ಲಿ ಚೀನಾ ಬಗ್ಗೆ ಬಹಳಷ್ಟು ದೇಶಗಳಿಗೆ ಅಸಮಾಧಾನ ಇದೆ. ಚೀನಾ ಆಚೆಗೆ ಉತ್ಪಾದನೆ ನಡೆಯಬೇಕು ಎಂಬ ಬಯಕೆ ಹಲವು ದೇಶಗಳಲ್ಲಿದೆ. ಹೀಗಾಗಿ, ಚೀನಾ ಹೊರತುಪಡಿಸಿ ಬೇರೆ ದೇಶಗಳಲ್ಲಿಯೂ ಹೂಡಿಕೆಗೆ ಆದ್ಯತೆ ನೀಡಲಾಗುತ್ತಿದೆ.
ಜಾಗತಿಕವಾಗಿ ಅಸ್ಥಿರತೆ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಗಳ ಕಾರಣದಿಂದಾಗಿ ಭಾರತದಲ್ಲಿ ಜಿಡಿಪಿ ಬೆಳವಣಿಗೆ ಶೇ 7ರಷ್ಟು ಆಗಿದೆ. ಇತರ ದೇಶಗಳ ಅಗತ್ಯಗಳು ನಮಗೆ ಅವಕಾಶಗಳನ್ನು ತೆರೆದುಕೊಡುತ್ತಿವೆ. ಇದನ್ನು ಬಳಕೆ ಮಾಡಿಕೊಳ್ಳುವ ರಾಜ್ಯಗಳು ಉದ್ಯೋಗ ಸೃಷ್ಟಿಸಲಿವೆ. ನಾವು ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿರುವುದು ಮಾತ್ರವೇ ಅಲ್ಲದೆ, ಬಂಡವಾಳಗಳನ್ನು ಉದ್ಯೋಗವನ್ನಾಗಿ ಪರಿವರ್ತಿಸಲು ಸನ್ನದ್ಧವಾಗಿದ್ದೇವೆ.
– ಐ.ಟಿ. ಅಲ್ಲದೆ ಬೇರೆ ಯಾವ ಆದ್ಯತಾ ವಲಯಗಳನ್ನು ಹೂಡಿಕೆಗೆ ಗುರುತಿಸಲಾಗಿದೆ?
ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಎಲ್ಲ ಪ್ರದೇಶಗಳಲ್ಲಿ ಹಾಗೂ ಎಲ್ಲ ವಲಯಗಳಲ್ಲಿ ಹೂಡಿಕೆ ಆಗಬೇಕು ಎಂಬುದು ಸಮಾವೇಶದ ಉದ್ದೇಶ. ನವೀಕರಿಸಬಹುದಾದ ಇಂಧನ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಬರಲಿದೆ ಎಂಬ ಪ್ರಾಥಮಿಕ ಮಾಹಿತಿ ಇದೆ. ಆಟೊಮೊಬೈಲ್, ಜವಳಿ, ಇತರ ತಯಾರಿಕಾ ವಲಯಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಇವು ಉದ್ಯೋಗ ಸೃಷ್ಟಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತವೆ. ವಿದ್ಯುತ್ ಚಾಲಿತ ವಾಹನಗಳ (ಇ.ವಿ) ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬೆಂಗಳೂರು ಮುಂದಿದೆ. ಮುಂದಿನ ಹಂತದಲ್ಲಿ ಇ.ವಿ. ತಯಾರಿಕೆಯಲ್ಲಿಯೂ ನಾವು ಮುಂದಿರಬೇಕು ಎಂಬ ಬಯಕೆ ಇದೆ. ರಕ್ಷಣಾ ವಲಯಕ್ಕೆ ಆದ್ಯತೆ ಕೊಡುತ್ತಿದ್ದೇವೆ. ಕೃತಕ ಬುದ್ಧಿಮತ್ತೆಗೆ (ಎ.ಐ) ಕೂಡ ಒತ್ತು ಕೊಡುತ್ತಿದ್ದೇವೆ.
– ಬೆಂಗಳೂರಿನ ಆಚೆಗೆ ಹೂಡಿಕೆ ಆಕರ್ಷಿಸಲು ಯಾವ ಕಾರ್ಯತಂತ್ರ ಇದೆ?
ರಾಜ್ಯದ ಎಲ್ಲ ಪ್ರದೇಶಗಳಲ್ಲಿಯೂ ಹೂಡಿಕೆ ಹೆಚ್ಚಬೇಕು ಎಂಬುದು ನಮ್ಮ ಉದ್ದೇಶ. ಯಾವ ಕಂಪನಿ, ಯಾವ ವಲಯದಲ್ಲಿ ಎಷ್ಟು ಹೂಡಿಕೆ ಮಾಡುತ್ತಿದೆ, ಯಾವ ಊರಿನಲ್ಲಿ ಹೂಡಿಕೆ ಮಾಡುತ್ತಿದೆ ಎಂಬ ಮಾಹಿತಿಯನ್ನು ನನಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಬೆಂಗಳೂರಿನ ಆಚೆಗೂ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಬರುವ ವಿಶ್ವಾಸ ಇದೆ. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಕ್ಲಸ್ಟರ್ ಧಾರವಾಡದಲ್ಲಿ ತಲೆಎತ್ತಿದೆ. ಜವಳಿ ಉದ್ಯಮವು ಬೆಂಗಳೂರಿನ ಆಚೆಗೂ ಹೂಡಿಕೆ ಮಾಡುತ್ತಿದೆ. ಈ ಉದ್ಯಮವು ದಾವಣಗೆರೆ, ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಕಡೆ ಮುಖಮಾಡಿದೆ.
ಮಹಿಳೆಯರು ಆರಂಭಿಸುವ ನವೋದ್ಯಮಕ್ಕೆ ₹ 50 ಲಕ್ಷ ಕೊಡುವ ಯೋಜನೆ ಜಾರಿಗೆ ಬಂದ ನಂತರದಲ್ಲಿ ರಾಜ್ಯದ ಎರಡನೆಯ ಹಂತದ ನಗರಗಳಲ್ಲಿ ನವೋದ್ಯಮಗಳು ಹೆಚ್ಚುತ್ತಿವೆ.
– ಬೆಂಗಳೂರಿನ ಮೂಲಸೌಕರ್ಯವನ್ನು ಹೇಗೆ ಉತ್ತಮಪಡಿಸುತ್ತೀರಿ?
ನಗರದ ಮೂಲಸೌಕರ್ಯವು ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆ ಕಾಣಲಿದೆ. ನಗರವನ್ನು ಯೋಜನಾಬದ್ಧವಾಗಿ ರೂಪಿಸುವ ಅಗತ್ಯಿವಿದೆ. ಇಲ್ಲಿ ವಾಹನ, ಜನಸಂಖ್ಯೆ ಹೆಚ್ಚುತ್ತಿದೆ. ಆದರೆ ರಸ್ತೆ ಜಾಲ ಮೊದಲಿದ್ದಷ್ಟೇ ಇದೆ. ಹಿಂದೆ ಉಪನಗರಗಳನ್ನು ಕಟ್ಟುವ ಮಾತುಗಳು ಬಂದಿದ್ದವು. ಈಗ ಆ ಕುರಿತು ಗಂಭೀರ ಪ್ರಯತ್ನ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.