ADVERTISEMENT

ಟೈಮ್‌ ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ಭಾರತದ ರಿಲಯನ್ಸ್‌ಗೆ ಸ್ಥಾನ

ಟೈಮ್‌ ನಿಯತಕಾಲಿಕ ವರದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 13:44 IST
Last Updated 2 ಜೂನ್ 2024, 13:44 IST
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌    

ಬೆಂಗಳೂರು: ಅಮೆರಿಕದ ಜನಪ್ರಿಯ ನಿಯತಕಾಲಿಕ ಟೈಮ್‌, ಬಿಡುಗಡೆ ಮಾಡಿರುವ ಜಗತ್ತಿನ ಪ್ರಮುಖ 100 ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಸೇರಿ ಭಾರತದ ಮೂರು ಕಂಪನಿಗಳು ಸ್ಥಾನ ಪಡೆದಿವೆ.

ರಿಲಯನ್ಸ್‌ ಇಂಡಸ್ಟ್ರೀಸ್‌, ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮತ್ತು ಟಾಟಾ ಸಮೂಹವು ‘ಟೈಮ್‌’ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿವೆ. 

ಈ ಪಟ್ಟಿಯನ್ನು ನಾಯಕ, ಆವಿಷ್ಕಾರ, ನಾವೀನ್ಯ, ಟೈಟನ್‌ (ಶಕ್ತಿಶಾಲಿ) ಮತ್ತು ಪ್ರವರ್ತಕ ಎಂದು ಐದು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಟಾಟಾ ಸಮೂಹವು ಟೈಟನ್‌ (ಶಕ್ತಿಶಾಲಿ) ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿವೆ. ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಪ್ರವರ್ತಕರ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದೆ.

ADVERTISEMENT

ಟೈಮ್‌ ನಿಯತಕಾಲಿಕವು ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ‘ಭಾರತದ ಶಕ್ತಿ’ ಎನ್ನುವ ಉಪನಾಮವನ್ನೂ ನೀಡಿದೆ. ಜವಳಿ ಮತ್ತು ಪಾಲಿಸ್ಟರ್‌ ಉದ್ದಿಮೆಯಾಗಿ ಆರಂಭವಾದ ರಿಲಯನ್ಸ್‌ ಕಂಪನಿಯು ಇಂದು ಅತಿದೊಡ್ಡ ಮತ್ತು ಶಕ್ತಿಶಾಲಿ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ. ಜತೆಗೆ, ದೇಶದ ಅತ್ಯಂತ ಮೌಲ್ಯಯುತ ಕಂಪನಿಯೂ ಆಗಿದೆ ಎಂದು ನಿಯತಕಾಲಿಕವು ತಿಳಿಸಿದೆ.

ಉದ್ಯಮಿ ಮುಕೇಶ್‌ ಅಂಬಾನಿ ನಾಯಕತ್ವದಲ್ಲಿ ಕಂಪನಿಯು ಇಂಧನ, ಚಿಲ್ಲರೆ ಮತ್ತು ದೂರಸಂಪರ್ಕ ಸೇರಿ ಹಲವು ಕ್ಷೇತ್ರಗಳಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿಕೊಂಡಿದೆ. ಭಾರತದ ಅತಿದೊಡ್ಡ ಡಿಜಿಟಲ್‌ ಸೇವಾ ಪೂರೈಕೆದಾರ ಮತ್ತು ದೂರಸಂಪರ್ಕ ಕಂಪನಿಯಾದ ಜಿಯೊ ಪ್ಲಾಟ್‌ಫಾರಂ 2021ರಲ್ಲಿ ಈ ಪಟ್ಟಿಗೆ ಸೇರಿಕೊಂಡಿತು. ರಿಲಯನ್ಸ್‌ ಮತ್ತು ಡಿಸ್ನಿ ನಡುವಿನ ₹70,941 ಕೋಟಿ ಮೌಲ್ಯದ ಒಪ್ಪಂದದ ಬಗ್ಗೆಯೂ ತನ್ನ ವರದಿಯಲ್ಲಿ ಟೈಮ್‌ ನಿಯತಕಾಲಿಕ ಉಲ್ಲೇಖಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.