ADVERTISEMENT

ಹಣಕಾಸು ಬಿಕ್ಕಟ್ಟು: ಎರಡು ದಿನ ಗೋ ಫಸ್ಟ್‌ ವಿಮಾನ ಸೇವೆ ಇಲ್ಲ

ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ ಕಂಪನಿ * ಎನ್‌ಸಿಎಲ್‌ಟಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 2 ಮೇ 2023, 16:15 IST
Last Updated 2 ಮೇ 2023, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಾಡಿಯಾ ಸಮೂಹದ ಒಡೆತನದ ‘ಗೋ ಫಸ್ಟ್’ ವಿಮಾನಯಾನ ಕಂಪನಿಯು, ತನ್ನ ವಿಮಾನ ಸೇವೆಗಳನ್ನು ಬುಧವಾರ ಮತ್ತು ಗುರುವಾರಕ್ಕೆ ಅನ್ವಯಿಸುವಂತೆ ಅಮಾನತುಗೊಳಿಸಿದೆ. ಹಣಕಾಸಿನ ತೀವ್ರ ಬಿಕ್ಕಟ್ಟಿನ ನಡುವೆ ಕಂಪನಿ ಈ ತೀರ್ಮಾನ ಕೈಗೊಂಡಿದೆ.

ಅಲ್ಲದೆ, ತನಗೆ ಹಣಕಾಸಿನ ಹೊಣೆಗಾರಿಕೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಸ್ವಯಂಪ್ರೇರಿತವಾಗಿ ತಿಳಿಸಿದೆ. ಕಂಪನಿಯ ಮುಖ್ಯಸ್ಥ ಕೌಶಿಕ್ ಖೋನಾ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ.

ವಿಮಾನಯಾನ ಕಂಪನಿಯು ತನ್ನ 28 ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ. ಇದು ಕಂಪನಿಯ ಬಳಿ ಇರುವ ಒಟ್ಟು ವಿಮಾನಗಳ ಪೈಕಿ ಅರ್ಧದಷ್ಟಕ್ಕಿಂತ ಹೆಚ್ಚು. ಪ್ರಾಟ್‌ ಆ್ಯಂಡ್‌ ವಿಟ್ನಿ ಕಂಪನಿಯು ಎಂಜಿನ್‌ಗಳನ್ನು ಪೂರೈಕೆ ಮಾಡದ ಕಾರಣದಿಂದಾಗಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಗೋ ಫಸ್ಟ್‌ ಹೇಳಿದೆ. ಇದು ವಿಮಾನಯಾನ ಕಂಪನಿಗೆ ಹಣಕಾಸಿನ ಬಿಕ್ಕಟ್ಟನ್ನು ತಂದಿತ್ತಿದೆ.

ADVERTISEMENT

ಹಣಕಾಸಿನ ಹೊಣೆಗಾರಿಕೆಯನ್ನು ನಿಭಾಯಿಸಲು ಆಗುತ್ತಿಲ್ಲ ಎಂದು ಸ್ವಯಂಪ್ರೇರಿತವಾಗಿ ಎನ್‌ಸಿಎಲ್‌ಟಿಗೆ ತಿಳಿಸಬೇಕಾಗಿದ್ದುದು ದುರದೃಷ್ಟಕರ. ಆದರೆ, ಕಂಪನಿಯ ಹಿತಾಸಕ್ತಿಯನ್ನು ಕಾಯಲು ಇದನ್ನು ಮಾಡಬೇಕಿತ್ತು ಎಂದು ಖೋನಾ ಹೇಳಿದ್ದಾರೆ.

ಈ ಬೆಳವಣಿಗೆಗಳ ಕುರಿತು ಕಂಪನಿಯು ಕೇಂದ್ರ ಸರ್ಕಾರಕ್ಕೆ ಕೂಡ ಮಾಹಿತಿ ನೀಡಿದೆ. ಎನ್‌ಸಿಎಲ್‌ಟಿ ತನ್ನ ಮನವಿಯನ್ನು ಸ್ವೀಕರಿಸಿದ ನಂತರದಲ್ಲಿ ವಿಮಾನ ಹಾರಾಟ ಮತ್ತೆ ಆರಂಭವಾಗುತ್ತದೆ ಎಂದು ಖೋನಾ ಹೇಳಿದ್ದಾರೆ. ಗೋ ಫಸ್ಟ್ ಕಂಪನಿಯಲ್ಲಿ ಒಟ್ಟು ಐದು ಸಾವಿರಕ್ಕೂ ಹೆಚ್ಚು ನೌಕರರು ಇದ್ದಾರೆ. ಗೋ ಫಸ್ಟ್ ಕಂಪನಿಯು 17 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಕಾರ್ಯಾಚರಣೆ ನಡೆಸುತ್ತಿದೆ.

ಕಂಪನಿಗೆ ನೋಟಿಸ್: ಎರಡು ದಿನಗಳಮಟ್ಟಿಗೆ ವಿಮಾನ ಹಾರಾಟ ರದ್ದುಗೊಳಿಸಲು ಕಂಪನಿ ತೀರ್ಮಾನಿಸಿದ ನಂತರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಕಂಪನಿಗೆ ನೋಟಿಸ್ ಜಾರಿಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.