ADVERTISEMENT

ಸೋಮವಾರದಿಂದ ಚಿನ್ನದ ಬಾಂಡ್‌ನ 7ನೇ ಕಂತು

ಪಿಟಿಐ
Published 10 ಅಕ್ಟೋಬರ್ 2020, 13:05 IST
Last Updated 10 ಅಕ್ಟೋಬರ್ 2020, 13:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಚಿನ್ನದ ಬಾಂಡ್‌ ಯೋಜನೆಯ ಏಳನೇ ಕಂತು ಸೋಮವಾರದಿಂದ ಆರಂಭವಾಗಲಿದ್ದು, ಶುಕ್ರವಾರ ಅಂತ್ಯವಾಗಲಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನೀಡಿಕೆ ದರವನ್ನು ಪ್ರತಿ ಗ್ರಾಂಗೆ ₹ 5,051 ನಿಗದಿ ಮಾಡಿದೆ. ಆನ್‌ಲೈನ್‌ ಮೂಲಕ ಬಾಂಡ್‌ ಖರೀದಿಗೆ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ ವಿನಾಯಿತಿ ಸಿಗಲಿದೆ. ಹೀಗಾಗಿ ಇಂತಹ ಹೂಡಿಕೆದಾರರಿಗೆ ನೀಡಿಕೆ ಬೆಲೆ ₹ 5,001 ಇರಲಿದೆ.

ಕೇಂದ್ರ ಸರ್ಕಾರದ ಸಮ್ಮುಖದಲ್ಲಿ ಆರ್‌ಬಿಐ ಈ ಬಾಂಡ್‌ಗಳನ್ನು ವಿತರಣೆ ಮಾಡಲಿದೆ. ಚಿನ್ನದ ಬಾಂಡ್‌ನ 8ನೇ ಕಂತು ನವೆಂಬರ್‌ 9 ರಿಂದ 13ರವರೆಗೆ ಇರಲಿದೆ. ಅದಕ್ಕೂ ಮೊದಲು ನೀಡಿಕೆ ದರವನ್ನು ಗೋಷಿಸಲಾಗುವುದು ಎಂದು ಹೇಳಿದೆ.

ADVERTISEMENT

ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಬಳಕೆಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿ ಚಿನ್ನದ ಬಾಂಡ್‌ ಯೋಜನೆ ಜಾರಿಗೊಳಿಸಿತು. ಬ್ಯಾಂಕ್‌ಗಳು, ಆಯ್ದ ಅಂಚೆ ಕಚೇರಿಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್), ರಾಷ್ಟ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಈ ಬಾಂಡ್‌ಗಳನ್ನು ಮಾರಾಟ ಮಾಡಲಾಗುವುದು.

ಆರ್‌ಬಿಐನ 2019–20ರ ವಾರ್ಷಿಕ ವರದಿಯ ಪ್ರಕಾರ, 2015ರ ನವೆಂಬರ್‌ನಲ್ಲಿ ಯೋಜನೆ ಜಾರಿಗೊಳಿಸಿದ ಬಳಿಕ 37 ಕಂತುಗಳಲ್ಲಿ ಒಟ್ಟಾರೆ ₹ 9,653 ಕೋಟಿ (30.98 ಟನ್‌) ಸಂಗ್ರಹಿಸಲಾಗಿದೆ. 2019–20ರಲ್ಲಿಯೇ ಆರ್‌ಬಿಐ 10 ಕಂತುಗಳಲ್ಲಿ ₹ 2,316 ಕೋಟಿ ಸಂಗ್ರಹವಾಗಿದೆ.

ಯೋಜನೆಯ ವಿವರ

ನೀಡಿಕೆ ಬೆಲೆ ಪ್ರತಿ ಗ್ರಾಂಗೆ ₹ 5,051

ಆನ್‌ಲೈನ್‌ ಮೂಲಕ ಖರೀದಿಗೆ ₹5001

ಕನಿಷ್ಠ ಹೂಡಿಕೆ 1 ಗ್ರಾಂ

ಗರಿಷ್ಠ ಹೂಡಿಕೆ 500 ಗ್ರಾಂ

ಹಿಂದೂ ಅವಿಭಕ್ತ ಕುಟುಂಬದ ಖರೀದಿ ಮಿತಿ 4 ಕೆ.ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.