ADVERTISEMENT

ಏನಿದು ಗೋಲ್ಡ್ ಬಾಂಡ್‌ ಯೋಜನೆ? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 19:30 IST
Last Updated 6 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳೆದ ಜೂನ್ 16 ರಂದು ಕೇಂದ್ರ ಹಣಕಾಸು ಸಚಿವಾಲಯವು 2022-23 ನೇ ಸಾಲಿಗೆ ಸಾವರಿನ್ ಗೋಲ್ಡ್ ಬಾಂಡ್ಸ್ ಸ್ಕೀಮ್‌ನ (Sovereign Gold Bonds - SGBs) ಎರಡು ಭಾಗಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ. ಈ ಯೋಜನೆ ಪರಿಕಲ್ಪನೆ ಹಾಗೂ ಮತ್ತಿತರ ಮಾಹಿತಿ ಇಲ್ಲಿದೆ.

* ಸಾವರಿನ್ ಗೋಲ್ಡ್ ಬಾಂಡ್‌ಗಳು,ಚಿನ್ನದ ಹೆಸರಿನಲ್ಲಿ ಹೂಡುವ ಸರ್ಕಾರಿ ಭದ್ರತಾಪತ್ರಗಳಾಗಿವೆ.

* ಇದು ಭೌತಿಕ ಚಿನ್ನವನ್ನು ಕೂಡಿಟ್ಟುಕೊಳ್ಳುವ ಬದಲು ಬಾಂಡ್ ಪತ್ರಗಳಲ್ಲಿ ಚಿನ್ನ ಖರೀದಿಸುವ ಸಲುವಾಗಿ ಬಂದ ಹೊಸ ಯೋಜನೆಯಾಗಿದೆ. ಹೂಡಿಕೆದಾರರು ನಿಗದಿತ ಬೆಲೆಯನ್ನು ನಗದು ರೂಪದಲ್ಲಿ ಪಾವತಿಸಬೇಕು. ಮತ್ತು ಬಾಂಡ್‌ಗಳ ಆಯಾ‌ ಸಮಯದ ಬೆಲೆಗೆ ತಕ್ಕಂತೆ ನಗದು ರೂಪದಲ್ಲಿ ತಿರುಗಿ ಪಡೆಯಲಾಗುತ್ತದೆ.

ADVERTISEMENT

* ಈ ಬಾಂಡ್ ಅನ್ನು ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ನೀಡುತ್ತದೆ.

* ಬಾಂಡ್‌ಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು, ಶೆಡ್ಯೂಲ್ಡ್ ಖಾಸಗಿ ಬ್ಯಾಂಕ್‌ಗಳು, ಶೆಡ್ಯೂಲ್ಡ್ ಫಾರಿನ್ ಬ್ಯಾಂಕ್‌ ಗಳು, ಗೊತ್ತುಪಡಿಸಿದ ಪೋಸ್ಟ್ ಆಫೀಸ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL) ಮತ್ತು ಅಧಿಕೃತ ಸ್ಟಾಕ್ ಎಕ್ಸ್‌ಚೇಂಜ್‌ಗಳ ಕಚೇರಿಗಳು ತಮ್ಮ ಶಾಖೆಗಳ ಮೂಲಕ ನೇರವಾಗಿ ಅಥವಾ ಅವರ ಏಜೆಂಟ್‌ಗಳ ಮೂಲಕ ಬಿಡುಗಡೆ ಮಾಡಲಾಗುತ್ತದೆ.

* ಬಾಂಡ್‌ಗಳನ್ನು ಕನಿಷ್ಟ ಒಂದು ಗ್ರಾಂ ಚಿನ್ನ ಮತ್ತು ಅದರ ಗುಣಕಗಳಲ್ಲಿ ನೀಡಲಾಗುತ್ತದೆ. ಬಾಂಡ್‌ನಲ್ಲಿ ಕನಿಷ್ಠ ಒಂದು ಗ್ರಾಂ ಚಿನ್ನ ಹೂಡಿಕೆ ಮಾಡಬಹುದು. ಗರಿಷ್ಟ ಹೂಡಿಕೆಯ ಮಿತಿಯನ್ನು ವ್ಯಕ್ತಿಗಳಿಗೆ 4 ಕೆ.ಜಿ, ಹಿಂದೂ ಅವಿಭಜಿತ ಕುಟುಂಬಕ್ಕೆ (HUF) 4 ಕೆಜಿ ಮತ್ತು ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳಿಗೆ 20 ಕೆಜಿ ನಿಗದಿಪಡಿಸಲಾಗಿದೆ (ಇವು ಪ್ರತಿ ಹಣಕಾಸು ವರ್ಷಕ್ಕೆ ಕಾಲಕಾಲಕ್ಕೆ ಸರ್ಕಾರದಿಂದ ಸೂಚಿಸಲಾಗುವಂತೆ ಇರುತ್ತದೆ)

* ಜಂಟಿ ಹೂಡಿಕೆಯ ಸಂದರ್ಭದಲ್ಲಿ ಈ ಮಿತಿಯು ಮೊದಲ ಅರ್ಜಿದಾರರಿಗೆ ಅನ್ವಯಿಸುತ್ತದೆ. ಸರ್ಕಾರದಿಂದ ಆರಂಭಿಕ ವಿತರಣೆಯ ಸಮಯದಲ್ಲಿ ವಿವಿಧ ಭಾಗಗಳ ಅಡಿಯಲ್ಲಿ ಚಂದಾದಾರರಾದ ಬಾಂಡ್‌ಗಳು ಮತ್ತು ದ್ವಿತೀಯ ಮಾರುಕಟ್ಟೆ(ಷೇರು ಮಾರುಕಟ್ಟೆ)ಯಿಂದ ಖರೀದಿಸಿದ ಬಾಂಡ್‌ಗಳಿಗೆ‌ ಕೂಡಾ ಈ ವಾರ್ಷಿಕ ಮಿತಿಯು ಅನ್ವಯಿಸುತ್ತದೆ.

* ಬಾಂಡ್ ಅನ್ನು ಯಾವುದೇ ಬ್ಯಾಂಕ್‌ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟಿದ್ದರೆ ಮೇಲೆ ನಮೂದಿಸಲಾದ ಗರಿಷ್ಟ ಮಿತಿಯನ್ನು ಒಳಗೊಂಡಿರುವುದಿಲ್ಲ.

* ಅರ್ಹತಾ ಮಾನದಂಡಗಳನ್ನು ಪೂರೈಸುವ ಸಂಬಂಧಿ/ಸ್ನೇಹಿತ/ಯಾರಾದರೂ ಬಾಂಡ್ ಅನ್ನು ಉಡುಗೊರೆಯಾಗಿ ನೀಡಬಹುದು‌ ಅಥವಾ ವರ್ಗಾಯಿಸಬಹುದು.

* ಬಾಂಡ್‌ಗಳನ್ನು ಸರ್ಕಾರಿ ಸೆಕ್ಯುರಿಟಿಸ್ ಆಕ್ಟ್ 2006 ಮತ್ತು ಸರ್ಕಾರಿ ಸೆಕ್ಯುರಿಟಿಸ್ ರೆಗ್ಯುಲೇಷನ್ಸ್ 2007ರ ನಿಬಂಧನೆಗಳ ಅನುಸಾರವಾಗಿ ವಿತರಣಾ ಏಜೆಂಟ್‌ಗಳ ಬಳಿ ಲಭ್ಯವಿರುವ ವರ್ಗಾವಣೆಯ ಸಾಧನವನ್ನು ಬಳಸುವ ಮೂಲಕ ಈ ಬಾಂಡ್‌ಗಳ ಮೆಚ್ಯುರಿಟಿಗೆ ಮುಕ್ತಾಯಗೊಳ್ಳುವ ಮೊದಲೇ ವರ್ಗಾಯಿಸಬಹುದು.

ಹೂಡಿಕೆ ಮಾಡಲು ಅರ್ಹ ವ್ಯಕ್ತಿಗಳು

* ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ - 1999ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಭಾರತದಲ್ಲಿ ವಾಸಿಸುವ ವ್ಯಕ್ತಿಗಳು ಎಸ್‌ಬಿಜಿ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ.

* ಅರ್ಹ ಹೂಡಿಕೆದಾರರು ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟುಂಬಗಳು, ಟ್ರಸ್ಟ್‌ಗಳು, ವಿವಿಗಳು ಮತ್ತು ದತ್ತಿ ಸಂಸ್ಥೆಗಳನ್ನು ಒಳಗೊಂಡಿರುತ್ತಾರೆ.

ಬಡ್ಡಿ ದರ

* ಬಾಂಡ್‌ಗಳು ‌ಆರಂಭಿಕ ಹೂಡಿಕೆಯ ಮೊತ್ತದ ಮೇಲೆ ಪ್ರತಿ ವರ್ಷಕ್ಕೆ ಶೇ 2.50 (ನಿಶ್ಚಿತ ದರ) ದರದಲ್ಲಿ ಬಡ್ಡಿಯನ್ನು ನೀಡುತ್ತವೆ.

* ಬಡ್ಡಿಯನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ಅರೆವಾರ್ಷಿಕವಾಗಿ ಜಮಾ ಮಾಡಲಾಗುತ್ತದೆ ಮತ್ತು ಕೊನೆಯ ಬಡ್ಡಿಯನ್ನು ಅಸಲಿನ ಜೊತೆಗೆ ಮುಕ್ತಾಯದ ಮೊತ್ತಕ್ಕೆ ಸೇರಿಸಿ ಪಾವತಿಸಲಾಗುತ್ತದೆ.

ಬಾಂಡ್‌ ನಗದೀಕರಣ

* ಬಾಂಡ್‌ನ ಅವಧಿ 8 ವರ್ಷಗಳು.

* ಆದರೆ ಆರಂಭಿಕ ಐದನೇ ವರ್ಷದ(ಕೂಪನ್‌ನ ಬಿಡುಗಡೆಯ ದಿನಾಂಕದಿಂದ) ನಂತರ ಬಾಂಡ್‌ನ ನಗದಿನ ಮರುಪಡೆಯುವಿಕೆಯನ್ನು ಅನುಮತಿಸಲಾಗಿದೆ.

* ಬಾಂಡ್ ಅನ್ನು ಡಿಮ್ಯಾಟ್ ರೂಪದಲ್ಲಿ ಹೂಡಿಕೆ ಮಾಡಿದ್ದರೆ ಷೇರು ವ್ಯಾಪಾರವನ್ನೂ ಮಾಡಬಹುದಾಗಿದೆ.

* ಇದನ್ನು ಯಾವುದೇ ಅರ್ಹ ಹೂಡಿಕೆದಾರರಿಗೆ ವರ್ಗಾಯಿಸಬಹುದು.

ಮೇಲಾಧಾರ ಪತ್ರಗಳಾಗಿ ಎಸ್‌ಜಿಬಿ ಸ್ಕೀಮ್‌

* ಈ ಭದ್ರತೆಗಳು ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಂದ (NBFC) ಸಾಲಗಳಿಗೆ ಮೇಲಾಧಾರವಾಗಿ ಬಳಸಲು ಅರ್ಹವಾಗಿವೆ.

* ಸಾಲದ ಮೌಲ್ಯ ಅನುಪಾತವು ಕಾಲಕಾಲಕ್ಕೆ ಆರ್‌ಬಿಐ ಸೂಚಿಸುವ ಸಾಮಾನ್ಯ ಚಿನ್ನದ ಸಾಲದಂತೆಯೇ ಅನ್ವಯಿಸುತ್ತದೆ.

ಬಾಂಡ್‌ಗಳ ಮೇಲೆ ಸಾಲ ನೀಡುವ ಅಧಿಕಾರವು ಬ್ಯಾಂಕ್ ಅಥವಾ ಹಣಕಾಸು ಏಜೆನ್ಸಿಯ ನಿರ್ಧಾರಕ್ಕೆ ಒಳಪಟ್ಟಿ ರುತ್ತದೆ ಆದರೆ ಅದನ್ನು ಹಕ್ಕಿನ ವಿಷಯ ಎಂಬಂತೆ ಪರಿಗಣಿಸಲಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.