ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವಾದ ಮಂಗಳವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
10 ಗ್ರಾಂ ಶುದ್ಧ ಚಿನ್ನದ (ಶೇ 99.9 ಪರಿಶುದ್ಧತೆ) ದರವು ₹1,750 ಇಳಿಕೆಯಾಗಿದ್ದು, ₹77,800 ಆಗಿದೆ. ಸ್ಟ್ಯಾಂಡರ್ಡ್ ಚಿನ್ನದ (ಶೇ 99.5 ಶುದ್ಧತೆ) ದರವು 10 ಗ್ರಾಂಗೆ ಇಷ್ಟೇ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ₹77,400 ಆಗಿದೆ.
ಬೆಳ್ಳಿ ಧಾರಣೆಯು ಕೆ.ಜಿಗೆ ₹2,700 ಇಳಿಕೆಯಾಗಿದ್ದು, ₹91,300ರಂತೆ ಮಾರಾಟವಾಗಿದೆ.
‘ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿರುವುದು ಅಲ್ಲಿನ ಆರ್ಥಿಕತೆ ಬೆಳವಣಿಗೆ ಬಗ್ಗೆ ಆಶಾಭಾವವನ್ನು ಹೆಚ್ಚಿಸಿದೆ. ಡಾಲರ್ ಮೌಲ್ಯವೂ ಏರಿಕೆಯಾಗುತ್ತಿದೆ. ಅಲ್ಲದೆ, ಟ್ರಂಪ್ ಗೆಲುವಿನಿಂದಾಗಿ ರಷ್ಯಾ–ಉಕ್ರೇನ್ ಮತ್ತು ಇಸ್ರೇಲ್–ಇರಾನ್ ನಡುವೆ ಕದನ ವಿರಾಮ ಏರ್ಪಡುವ ಭರವಸೆ ಮೂಡಿದೆ. ಇದರಿಂದ ಹಳದಿ ಲೋಹದ ದರವು ಇಳಿಕೆಯಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.