ನವದೆಹಲಿ: ಅಂತರರಾಷ್ಟ್ರೀಯ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರಿಕೆಯಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ 10 ಗ್ರಾಂ ಶುದ್ಧ ಚಿನ್ನದ (ಶೇ 99.9 ಪರಿಶುದ್ಧತೆ) ಬೆಲೆಯಲ್ಲಿ ಶೇ 35ರಷ್ಟು ಹೆಚ್ಚಳವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಕಳೆದ ವರ್ಷದ ಅಕ್ಟೋಬರ್ 29ರಂದು ಶುದ್ಧ ಚಿನ್ನದ ಬೆಲೆಯು 10 ಗ್ರಾಂಗೆ ₹61,200 ಇತ್ತು. ಬುಧವಾರದ ವಹಿವಾಟಿನಲ್ಲಿ ₹82,400ಕ್ಕೂ ಮುಟ್ಟಿದೆ. ಒಟ್ಟಾರೆ ಒಂದು ವರ್ಷದ ಅವಧಿಯಲ್ಲಿ ₹21,200 ಏರಿಕೆಯಾಗಿದೆ.
ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಚಿನ್ನದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತ ಮಾಡಿತ್ತು. ಇದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಜಾಗತಿಕ ಬಿಕ್ಕಟ್ಟಿನ ಪರಿಣಾಮ ಧಾರಣೆಯು ಏರಿಕೆಯ ಹಾದಿ ಹಿಡಿದಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇನ್ನೂ ಶಮನಗೊಂಡಿಲ್ಲ. ಇದು ಸರಕು ಸಾಗಣೆ ಮತ್ತು ವಿಮಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಅಮೆರಿಕ ಬಾಂಡ್ ಗಳಿಕೆ ಇಳಿಕೆಯಾಗಿದೆ. ಡಾಲರ್ ಮೌಲ್ಯ ಕಡಿಮೆಯಾಗಿದೆ. ಹಾಗಾಗಿ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ದೃಷ್ಟಿ ನೆಟ್ಟಿದ್ದಾರೆ. ಇದರಿಂದ ಬೆಲೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಸ್ಟ್ಯಾಂಡರ್ಡ್ ಚಿನ್ನದ ದರ ಏರಿಕೆ:
ಧನ್‌ತೇರಸ್ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಸ್ಟ್ಯಾಂಡರ್ಡ್ ಚಿನ್ನದ (ಶೇ 99.5 ಶುದ್ಧತೆ) ದರದಲ್ಲಿ ಏರಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ 10 ಗ್ರಾಂಗೆ ₹1 ಸಾವಿರ ಏರಿಕೆಯಾಗಿದ್ದು, ₹82,000 ಆಗಿದೆ.
ಬೆಳ್ಳಿ ಧಾರಣೆಯು ಕೆ.ಜಿಗೆ ₹1,300 ಏರಿಕೆಯಾಗಿ, ₹1.01 ಲಕ್ಷಕ್ಕೆ ಮುಟ್ಟಿದೆ.
‘ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಬಿಕ್ಕಟ್ಟು ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಹಳದಿ ಲೋಹದ ಏರಿಕೆ ಮೇಲೆ ಪರಿಣಾಮ ಬೀರಿವೆ. ಹಬ್ಬದ ಋತುವಿನಲ್ಲಿ ಸ್ಥಳೀಯ ಆಭರಣ ತಯಾರಕರು ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು ಹೆಚ್ಚು ಚಿನ್ನ ಖರೀದಿಸುತ್ತಿದ್ದಾರೆ. ಇದರಿಂದ ಬೆಲೆ ಏರಿಕೆಯಾಗಿದೆ’ ಎಂದು ಎಲ್‌ಕೆಟಿ ಸೆಕ್ಯುರಿಟೀಸ್‌ನ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.