ನ್ಯೂಯಾರ್ಕ್ : ಪ್ರಸಕ್ತ ವರ್ಷವೂ ಆಲ್ಫಾಬೆಟ್ ಒಡೆತನದ ಗೂಗಲ್ ಕಂಪನಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ಕಂಪನಿಯ ಸಿಇಒ ಸುಂದರ್ ಪಿಚೈ ಅವರು, ಉದ್ಯೋಗಿಗಳಿಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ಕೆಲಸದ ಹೊರೆಯನ್ನು ಹಗುರಗೊಳಿಸುವ ನಿಟ್ಟಿನಲ್ಲಿ ಗೂಗಲ್ ಕಂಪನಿಯು ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದೆ. ಹಾಗಾಗಿ, ನೌಕರರ ವಜಾಕ್ಕೆ ನಿರ್ಧರಿಸಿದೆ ಎಂದು ಅಮೆರಿಕದ ನ್ಯೂಸ್ ಪೋರ್ಟಲ್ ‘ದಿ ವರ್ಜ್’ ವರದಿ ಮಾಡಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ಹೇಳಿದೆ.
ಪಿಚೈ ಅವರು ಈ ಕುರಿತು ಉದ್ಯೋಗಿಗಳಿಗೆ ಕಳುಹಿಸಿರುವ ಸಂದೇಶದ ಬಗ್ಗೆ ಗೂಗಲ್ ಪ್ರತಿನಿಧಿಗಳು ಖಚಿತಪಡಿಸಿದ್ದಾರೆ. ಆದರೆ, ಮೆಮೊದಲ್ಲಿರುವ ಹೆಚ್ಚಿನ ವಿವರವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ಹೇಳಿದೆ.
ಗೂಗಲ್ ಅಸಿಸ್ಟೆಂಟ್ ವಿಭಾಗ, ಹಾರ್ಡ್‌ವೇರ್ ಪಿಕ್ಸಲ್ ವಿಭಾಗ, ಜಾಹೀರಾತು ಮಾರಾಟ ವಿಭಾಗದಲ್ಲಿ ಹಲವು ನೌಕರರನ್ನು ವಜಾಗೊಳಿಸುವುದಾಗಿ ಕಳೆದ ವಾರ ಗೂಗಲ್ ಹೇಳಿತ್ತು.
2023ರ ಜನವರಿಯಲ್ಲಿ ಆಲ್ಫಾಬೆಟ್ ಕಂಪನಿಯು 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಕಂಪನಿಯ ಮಾಹಿತಿ ಪ್ರಕಾರ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 1,82,381 ಉದ್ಯೋಗಿಗಳು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.