ADVERTISEMENT

ಯುರೋಪ್‌ನಲ್ಲಿ ಉದ್ಯೋಗ ಕಡಿತ: ಗೂಗಲ್ ಕಚೇರಿಯಲ್ಲಿ ಪ್ರತಿಭಟನೆ

ರಾಯಿಟರ್ಸ್
Published 15 ಮಾರ್ಚ್ 2023, 10:33 IST
Last Updated 15 ಮಾರ್ಚ್ 2023, 10:33 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ಜ್ಯೂರಿಚ್‌: ತಂತ್ರಜ್ಞಾನ ದಿಗ್ಗಜ ಗೂಗಲ್, 200 ಕ್ಕೂ ಹೆಚ್ಚು ಕೆಲಸಗಾರರನ್ನು ಉದ್ಯೋಗದಿಂದ ವಜಾಗೊಳಿಸಿದ ನಂತರ ಸಂಸ್ಥೆಯ ನೂರಾರು ಉದ್ಯೋಗಿಗಳು ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿರುವ ಕಂಪನಿಯ ಕಚೇರಿಯಲ್ಲಿ ಬುಧವಾರ ಕೆಲಸ ಬಹಿಷ್ಕರಿಸಿ ಪ್ರತಿಭಟಿಸಿದರು.

ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ಪ್ರಪಂಚದಾದ್ಯಂತ 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಜನವರಿಯಲ್ಲಿ ಘೋಷಿಸಿತ್ತು. ಈ ವರ್ಷ ಅಮೆರಿಕದಲ್ಲಿ ಉದ್ಯೋಗ ಕಡಿತ ಹೆಚ್ಚಾಗಿದ್ದು, ವರ್ಷದ ಪ್ರಾರಂಭದಿಂದ 2,90,000 ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅದರ ಬೆನ್ನಲ್ಲೇ ಗೂಗಲ್‌ ಕೂಡ ಉದ್ಯೋಗ ಕಡಿತ ಘೋಷಿಸಿತ್ತು ಎಂದು ಲೇಆಫ್‌ ವೆಬ್‌ಸೈಟ್‌ ವರದಿ ಮಾಡಿದೆ.

ಗೂಗಲ್‌ನ ಜ್ಯೂರಿಚ್ ಕಚೇರಿಯಲ್ಲಿ ಸುಮಾರು 5,000 ಉದ್ಯೋಗಿಗಳಿದ್ದು, ಮುಂಬರುವ ಉದ್ಯೋಗ ಕಡಿತ ಪ್ರತಿಭಟಿಸಿ ಕಳೆದ ತಿಂಗಳು ಕೂಡ ಕೆಲಸ ಬಹಿಷ್ಕರಿಸಿ ಹೊರನಡೆದಿದ್ದರು.

ADVERTISEMENT

‘ಉದ್ಯೋಗ ಕಡಿತವನ್ನು ತಡೆಯುವ ಪ್ರಯತ್ನದಲ್ಲಿ 2,000 ಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ವೇತನ ಮತ್ತು ಕೆಲಸದ ಸಮಯವನ್ನು ಏರಿಕೆ ಪ್ರಸ್ತಾಪ ಮುಂದಿಟ್ಟಿದ್ದಾರೆ. ಆದರೆ ಗೂಗಲ್ ಸ್ಪಷ್ಟವಾಗಿ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ’ ಎಂದು ಐಟಿ ಉದ್ಯೋಗಿಗಳ ಒಕ್ಕೂಟವಾದ ಸಿಂಡಿಕಾಮ್‌ನ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

‘ಗೂಗಲ್ ಜ್ಯೂರಿಚ್‌ನಲ್ಲಿರುವ ಸದಸ್ಯರು ಕೆಲಸ ಬಹಿಷ್ಕರಿಸುವ ಮೂಲಕ ಒಗ್ಗಟ್ಟನ್ನು ತೋರಿಸುತ್ತಿದ್ದಾರೆ’ ಎಂದು ಸಿಂಡಿಕಾಮ್ ವಕ್ತಾರರು ತಿಳಿಸಿದ್ದಾರೆ.

‘ವಜಾಗೊಳಿಸುವಿಕೆ ಪಾರದರ್ಶಕವಾಗಿಲ್ಲ. ಕಂಪನಿಯು ಪ್ರತಿವರ್ಷ ಶತಕೋಟಿ ಲಾಭ ಗಳಿಸುತ್ತಿರುವ ಸಮಯದಲ್ಲಿ ಸಿಬ್ಬಂದಿ ವಜಾಗೊಳಿಸುತ್ತಿರುವುದು ಉದ್ಯೋಗಿಗಳಲ್ಲಿ ನಿರಾಸೆ ಮೂಡಿಸಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.