ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಕರ್ನಾಟಕ ಸೇರಿದಂತೆ ರಾಜ್ಯಗಳ ತೆರಿಗೆ ಪಾಲಿನ ಎರಡು ಕಂತುಗಳನ್ನು ಬುಧವಾರ ಬಿಡುಗಡೆ ಮಾಡಿದೆ.
ರಾಜ್ಯಗಳ ಮಾಸಿಕ ಕಂತಿನ ಮೊತ್ತ ₹58,332 ಕೋಟಿ. ಎರಡು ಕಂತುಗಳ ಮೊತ್ತ ₹1.16 ಲಕ್ಷ ಕೋಟಿ ಮೊತ್ತವನ್ನು ಒಂದೇ ಸಲ ಬಿಡುಗಡೆ ಮಾಡಲಾಗಿದೆ.ರಾಜ್ಯಗಳ ಕೈ ಬಲಪಡಿಸುವ ಕೇಂದ್ರ ಸರ್ಕಾರದ ಬದ್ಧತೆಗೆ ಇದು ಅನುಗುಣವಾಗಿದ್ದು, ರಾಜ್ಯಗಳು ತಮ್ಮ ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚವನ್ನು ತ್ವರಿತಗೊಳಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಉತ್ತರ ಪ್ರದೇಶಕ್ಕೆ ಗರಿಷ್ಠ ₹20,928 ಕೋಟಿ ಬಿಡುಗಡೆ ಆಗಿದ್ದರೆ, ಬಿಹಾರಕ್ಕೆ ₹11,734 ಕೋಟಿ ಬಿಡುಗಡೆ ಆಗಿದೆ. ಕರ್ನಾಟಕಕ್ಕೆ ₹4,254 ಕೋಟಿ ಬಿಡುಗಡೆ ಮಾಡಲಾಗಿದೆ. 15ನೇ ಹಣಕಾಸು ಆಯೋಗವು ರಾಜ್ಯ ಜನಸಂಖ್ಯೆ ಹಾಗೂ ತಲಾ ಆದಾಯದ ಆಧಾರದಲ್ಲಿ ರಾಜ್ಯಗಳಿಗೆ ಪಾಲನ್ನು ನಿಗದಿ ಮಾಡಿದೆ. ಇದರಿಂದಾಗಿ, ಉತ್ತರದ ರಾಜ್ಯಗಳ ಪಾಲಿನ ಪ್ರಮಾಣ ಹೆಚ್ಚಾಗಿದೆ. ದಕ್ಷಿಣದ ರಾಜ್ಗಗಳ ಪಾಲಿನ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ.
14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಪಾಲನ್ನು ಶೇ 4.71 ನೀಡಬೇಕು ಎಂದು ಶಿಫಾರಸು ಮಾಡಿತ್ತು. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ 3.67 ಪಾಲು ಕೊಡಬೇಕು ಎಂದು ಶಿಫಾರಸು ಮಾಡಿತ್ತು. ಇದರಿಂದಾಗಿ, ಕರ್ನಾಟಕದ ಪಾಲು ವಾರ್ಷಿಕ ಸರಾಸರಿ ₹36 ಸಾವಿರ ಕೋಟಿಯಿಂದ ₹29 ಸಾವಿರ ಕೋಟಿಗೆ ಇಳಿದಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದರು.
‘ದೇಶದಲ್ಲಿ ಅತೀ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕೋವಿಡ್‌ನಿಂದಾಗಿ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆ ಆಗಿದೆ. ಇದರ ನಡುವೆ, 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ರಾಜ್ಯದ ಪಾಲು ಕಡಿಮೆ ಆಗಿದೆ. ಹೀಗಾಗಿ, ರಾಜ್ಯದ ಪಾಲನ್ನು ಹೆಚ್ಚಿಸಬೇಕು’ ಎಂದು ಮನವಿ ಸಲ್ಲಿಸಿದ್ದರು.
ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ಯು.ಟಿ.ಖಾದರ್, ಕೃಷ್ಣ ಬೈರೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಧ್ವನಿ ಎತ್ತಿದ್ದರು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.