ನವದೆಹಲಿ: ಪಿಎಂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷ್ಣೋನ್ನತಿ ಯೋಜನೆಯಡಿ ₹1 ಲಕ್ಷ ಕೋಟಿ ವೆಚ್ಚ ಮಾಡಲು ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
ಸುಸ್ಥಿರ ಕೃಷಿಗೆ ಉತ್ತೇಜನ ಹಾಗೂ ದೇಶದ ಆಹಾರ ಭದ್ರತೆಗೆ ಒತ್ತು ನೀಡುವುದು ಈ ಯೋಜನೆಗಳ ಉದ್ದೇಶವಾಗಿದೆ.
ಎಣ್ಣೆಕಾಳು ಉತ್ಪಾದನೆಗೆ ಒತ್ತು
ರಾಷ್ಟ್ರೀಯ ಖಾದ್ಯ ತೈಲಗಳು ಮತ್ತು ಎಣ್ಣೆಕಾಳುಗಳ ಮಿಷನ್‌ನಡಿ ₹10,103 ಕೋಟಿ ವೆಚ್ಚ ಮಾಡುವುದಕ್ಕೂ ಸಂಪುಟ ಒಪ್ಪಿಗೆ ಸೂಚಿಸಿದೆ.
ದೇಶೀಯ ಬೇಡಿಕೆಗೆ ಅನುಗುಣವಾಗಿ ಸರ್ಕಾರವು ಶೇ 50ರಷ್ಟಕ್ಕೂ ಹೆಚ್ಚು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಮುಂದಿನ 7 ವರ್ಷದಲ್ಲಿ ದೇಶೀಯವಾಗಿ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಮಿಷನ್ ರೂಪಿಸಲಾಗಿದೆ.
ದೇಶದಲ್ಲಿ 2022–23ರಲ್ಲಿ 39 ದಶಲಕ್ಷ ಟನ್ ಎಣ್ಣೆಕಾಳುಗಳ ಉತ್ಪಾದನೆಯಾಗಿದೆ. 2030–31ರ ವೇಳೆಗೆ 69.7 ದಶಲಕ್ಷ ಟನ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಎಣ್ಣೆಕಾಳುಗಳ ಉತ್ಪಾದನಾ ಪ್ರದೇಶವನ್ನು ಹೆಚ್ಚುವರಿಯಾಗಿ 40 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.