ನವದೆಹಲಿ: ಸ್ಥಗಿತಗೊಂಡಿರುವ ಗೃಹ ನಿರ್ಮಾಣ ಯೋಜನೆಗಳಿಗೆ ನೆರವಾಗಿ ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರವು ₹ 25 ಸಾವಿರ ಕೋಟಿ ಮೊತ್ತದ ಪರಿಹಾರ ನಿಧಿ ಸ್ಥಾಪಿಸಲು ಮುಂದಾಗಿದೆ.
ಹಣಕಾಸು ಅಲಭ್ಯತೆ ಮತ್ತಿತರ ಕಾರಣಕ್ಕೆ ನಿರ್ಮಾಣ ಚಟುವಟಿಕೆ ಸ್ಥಗಿತಗೊಂಡಿರುವ 1,600 ಗೃಹ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಲು ಹಣಕಾಸು ನೆರವು ನೀಡುವುದು ಈ ನಿಧಿಯ ಉದ್ದೇಶವಾಗಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಈ ಮಹತ್ವದ ನಿರ್ಧಾರ ಕೈಗೊಂಡಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ನಿರ್ದಿಷ್ಟ ಉದ್ದೇಶಕ್ಕೆ ಸ್ಥಾಪಿಸಲಾಗುವ ಪರ್ಯಾಯ ಹೂಡಿಕೆ ನಿಧಿಯಲ್ಲಿ (ಎಐಎಫ್) ಕೇಂದ್ರ ಸರ್ಕಾರ ₹ 10 ಸಾವಿರ ಕೋಟಿ, ಎಸ್‌ಬಿಐ ಮತ್ತು ಎಲ್‌ಐಸಿ ಜತೆಯಾಗಿ ₹ 15 ಸಾವಿರ ಕೋಟಿ ತೊಡಗಿಸಲಿವೆ. 4.58 ಲಕ್ಷ ಮನೆಗಳನ್ನು ಒಳಗೊಂಡಿರುವ 1,600 ಗೃಹ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಲು ಈ ನಿಧಿಯನ್ನು ಬಳಸಿಕೊಳ್ಳಲಾಗುವುದು. ಈ ನಿಧಿಯಲ್ಲಿ ಪಿಂಚಣಿ ನಿಧಿಯೂ ಹಣ ತೊಡಗಿಸುವ ನಿರೀಕ್ಷೆ ಇದೆ. ಇದರಿಂದ ನಿಧಿ ಮೊತ್ತ ಹೆಚ್ಚಲಿದೆ.
‘ವಸೂಲಾಗದ ಸಾಲ (ಎನ್‌ಪಿಎ) ಎಂದು ಘೋಷಿಸಿರುವ ಮತ್ತು ಸಾಲ ವಸೂಲಾತಿ ಪ್ರಕ್ರಿಯೆಗೆ (ಐಬಿಸಿ) ಒಳಗಾಗಿರುವ ಯೋಜನೆಗಳಿಗೂ ಈ ನಿಧಿಯ ನೆರವು ದೊರೆಯಲಿದೆ’’ ಎಂದು ಹೇಳಿದ್ದಾರೆ.
ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚಲಿವೆ. ಸಿಮೆಂಟ್, ಉಕ್ಕು, ಕಬ್ಬಿಣಕ್ಕೆ ಬೇಡಿಕೆ ಹೆಚ್ಚಳಗೊಂಡು ಈ ಉದ್ದಿಮೆಗಳು ಚೇತರಿಸಿಕೊಳ್ಳಲಿವೆ. ಆರ್ಥಿಕತೆಯ ಇತರ ಪ್ರಮುಖ ವಲಯಗಳಲ್ಲಿನ ಒತ್ತಡವೂ ನಿವಾರಣೆಯಾಗುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.