ನವದೆಹಲಿ: ಕಳೆದ ಒಂದು ತಿಂಗಳಿನಿಂದಲೂ ದೇಶದ ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ತೊಗರಿ, ಉದ್ದು ಮತ್ತು ಕಡಲೆ ಬೇಳೆ ಬೆಲೆಯು ಶೇ 4ರಷ್ಟು ಇಳಿಕೆಯಾಗಿದೆ. ಹಾಗಾಗಿ, ಚಿಲ್ಲರೆ ಮಾರಾಟಗಾರರು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಮಂಗಳವಾರ ಈ ಕುರಿತು ಭಾರತೀಯ ಸಣ್ಣ ವ್ಯಾಪಾರಿಗಳ ಒಕ್ಕೂಟದೊಟ್ಟಿಗೆ (ಆರ್‌ಎಐ) ಸಭೆ ನಡೆಸಿತು. ಒಕ್ಕೂಟದ ವ್ಯಾಪ್ತಿಯಲ್ಲಿ 2,300ಕ್ಕೂ ಹೆಚ್ಚು ಪ್ರತಿನಿಧಿಗಳಿದ್ದಾರೆ. ದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳನ್ನು ಹೊಂದಿದೆ.
ಒಕ್ಕೂಟದ ಪ್ರತಿನಿಧಿಗಳು, ರಿಲಯನ್ಸ್ ರಿಟೇಲ್, ಡಿ–ಮಾರ್ಟ್, ಟಾಟಾ ಸ್ಟೋರ್ಸ್, ಸ್ಪೆನ್ಸರ್ಸ್ ರಿಟೇಲ್, ಆರ್‌ಎಸ್‌ಪಿಜಿ, ವಿ–ಮಾರ್ಟ್ ಸೇರಿ ಹಲವು ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸಗಟು ದರ ಇಳಿಕೆಗೆ ತಕ್ಕಂತೆ ಚಿಲ್ಲರೆ ಮಾರಾಟಗಾರರು ಈ ಪದಾರ್ಥಗಳಿಗೆ ಬೆಲೆ ನಿಗದಿಪಡಿಸಬೇಕು. ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದರ ಪ್ರಯೋಜನ ನೀಡಬೇಕು. ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ದರ ಏರಿಸಿ ಲಾಭ ಪಡೆಯುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ಎಚ್ಚರಿಕೆ ನೀಡಿದೆ.
ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ಅವರು, ಬೇಳೆಕಾಳುಗಳ ದಾಸ್ತಾನು ಬಗ್ಗೆ ಪರಿಶೀಲನೆ ನಡೆಸಿದರು.
ಬೇಳೆಕಾಳುಗಳು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ರಿಟೇಲ್ ಕೈಗಾರಿಕಾ ವಲಯವು ಸಹಕಾರ ನೀಡಬೇಕಿದೆ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.