ADVERTISEMENT

ನೈಸರ್ಗಿಕ ಅನಿಲ ಬೆಲೆ ಏರಿಕೆ, ಸಿಎನ್‌ಜಿ ದುಬಾರಿ ಸಾಧ್ಯತೆ

ಪಿಟಿಐ
Published 1 ಏಪ್ರಿಲ್ 2022, 7:12 IST
Last Updated 1 ಏಪ್ರಿಲ್ 2022, 7:12 IST

ನವದೆಹಲಿ (ಪಿಟಿಐ): ವಿದ್ಯುತ್ ಉತ್ಪಾದನೆಯಲ್ಲಿ, ರಸಗೊಬ್ಬರ ತಯಾರಿಕೆಯಲ್ಲಿ ಬಳಸುವ ನೈಸರ್ಗಿಕ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರವು ಎರಡು ಪಟ್ಟಿಗಿಂತ ಹೆಚ್ಚು ಮಾಡಿದೆ. ಇದೇ ನೈಸರ್ಗಿಕ ಅನಿಲವನ್ನು ಸಿಎನ್‌ಜಿ ಆಗಿ ಪರಿವರ್ತಿಸಿ ಅದನ್ನು ಕೊಳವೆ ಮೂಲಕ ಮನೆಗಳಿಗೆ ಅಡುಗೆಗೆ ಪೂರೈಕೆ ಮಾಡಲಾಗುತ್ತದೆ.

ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಯಲ್ಲಿ ಆಗಿರುವ ಹೆಚ್ಚಳದ ಪರಿಣಾಮವಾಗಿ ಈ ಏರಿಕೆ ಆಗಿದೆ. ನಿಯಂತ್ರಣಕ್ಕೆ ಒಳಪಟ್ಟಿರುವ ಹಳೆಯ ನಿಕ್ಷೇಪಗಳಿಂದ ಉತ್ಪಾದನೆ ಆಗುವ ಅನಿಲ ಬೆಲೆಯು ದಾಖಲೆಯ 6.10 ಡಾಲರ್‌ಗೆ (ಪ್ರತಿ ಮಿಲಿಯನ್ ಬ್ರಿಟಿಷ‌್ ಥರ್ಮಲ್ ಯೂನಿಟ್‌ಗೆ) ಏರಿಕೆ ಅಗಲಿದೆ. ಅದು 2.90 ಡಾಲರ್ ಮಟ್ಟದಲ್ಲಿತ್ತು.

ಇದರಿಂದಾಗಿ ಸಿಎನ್‌ಜಿ ಮತ್ತು ಕೊಳವೆ ಮೂಲಕ ಪೂರೈಕೆ ಆಗುವ ಅಡುಗೆ ಅನಿಲದ ಬೆಲೆಯಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಏಪ್ರಿಲ್ 1ರಿಂದ ಆರು ತಿಂಗಳವರೆಗೆ ಹೊಸ ದರ ಜಾರಿಯಲ್ಲಿ ಇರಲಿದೆ. ಈ ಹೆಚ್ಚಳವು ಇಂಧನ ವಿಭಾಗದಲ್ಲಿನ ಹಣದುಬ್ಬರ ಪ್ರಮಾಣವನ್ನು ಇನ್ನಷ್ಟು ಜಾಸ್ತಿ ಮಾಡಲಿದೆ.

ADVERTISEMENT

ಹೊಸ ಹಾಗೂ ಕಠಿಣ ನಿಕ್ಷೇಪಗಳಿಂದ ಹೊರತೆಗೆಯುವ ಅನಿಲದ ದರವು 6.13 ಡಾಲರ್‌ ಇದ್ದಿದ್ದು 9.92 ಡಾಲರ್‌ಗೆ ಏರಿಕೆ ಆಗಲಿದೆ ಎಂದು ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕದ (ಪಿಪಿಎಸಿ) ಅಧಿಸೂಚನೆ ಹೇಳಿದೆ. ದೇಶದ ಅನಿಲ ಉತ್ಪಾದಕರಿಗೆ ನೀಡುತ್ತಿರುವ ಅತಿಹೆಚ್ಚಿನ ದರ ಇದಾಗಿದೆ.

ಈ ಏರಿಕೆಯ ಪರಿಣಾಮವಾಗಿ, ಸಿಎನ್‌ಜಿ ಹಾಗೂ ದೆಹಲಿ, ಮುಂಬೈ ನಗರಗಳಲ್ಲಿ ಕೊಳವೆ ಮೂಲಕ ಪೂರೈಕೆ ಆಗುವ ಅನಿಲದ ಬೆಲೆ ಶೇಕಡ 10ರಿಂದ ಶೇ 15ರಷ್ಟು ತುಟ್ಟಿ ಆಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಅನಿಲ ಬಳಸಿ ವಿದ್ಯುತ್ ಉತ್ಪಾದನೆ ಮಾಡುವುದು ಕೂಡ ದುಬಾರಿ ಆಗಲಿದೆ.

ರಸಗೊಬ್ಬರ ತಯಾರಿಕೆ ವೆಚ್ಚದಲ್ಲಿ ಹೆಚ್ಚಳ ಆಗಲಿದ್ದು, ಸರ್ಕಾರವು ರಸಗೊಬ್ಬರಕ್ಕೆ ಸಬ್ಸಿಡಿ ನೀಡುತ್ತಿರುವ ಕಾರಣ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿಕ್ಕಿಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.