ನವದೆಹಲಿ : 50 ಜವಳಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ 20ರಷ್ಟು ಹೆಚ್ಚಿಸಲಾಗಿದೆ.
ದೇಶಿ ಸಿದ್ಧ ಉಡುಪು ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲು ಬಹುತೇಕ ಜವಳಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ದುಪ್ಪಟ್ಟುಗೊಳಿಸಲಾಗಿದೆ. ಬಾಂಗ್ಲಾದೇಶದಂತಹ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕೆಲ ದೇಶಗಳಿಗೆ ಅನ್ವಯಿಸಿರುವ ತೆರಿಗೆರಹಿತ ಸೌಲಭ್ಯ ಮುಂದುವರೆಸಲಾಗಿದೆ.
ಕೆಲ ಉತ್ಪನ್ನಗಳ ವಹಿವಾಟಿನ ಮೊತ್ತ ಆಧರಿಸಿ ವಿಧಿಸುವ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಈ ಸಂಬಂಧ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಅಧಿಸೂಚನೆ ಹೊರಡಿಸಿದೆ. ನೇಯ್ದ ಬಟ್ಟೆ, ಮಕ್ಕಳ ಬಟ್ಟೆ, ಜಾಕೆಟ್, ಸೂಟ್, ನೆಲಹಾಸು ಮುಂತಾದವು ಈ 50 ಸರಕುಗಳ ಪಟ್ಟಿಯಲ್ಲಿ ಇವೆ.
ವಿಶ್ವ ವ್ಯಾಪಾರ ಸಂಘಟನೆಯ ನಿಯಮಾವಳಿ ಪ್ರಕಾರ, ಜವಳಿ ಕ್ಷೇತ್ರಕ್ಕೆ ಸರ್ಕಾರ ಇನ್ನಷ್ಟು ಕೊಡುಗೆ ಕೊಡುವಂತಿಲ್ಲ. ಈ ಕಾರಣಕ್ಕೆ ದೇಶಿ ಉತ್ಪಾದನೆ ಹೆಚ್ಚಿಸಲು ಸರ್ಕಾರ ಈಗ ಆಮದು ಸುಂಕವನ್ನು ದುಪ್ಪಟ್ಟುಗೊಳಿಸಿದೆ.
ಜವಳಿ ಸಿದ್ಧ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಡ್ಯೂಟಿ ಹೆಚ್ಚಿಸಿರುವುದರಿಂದ ದೇಶಿ ಸಿದ್ಧ ಉಡುಪು ತಯಾರಕರಿಗೆ ಲಾಭವಾಗಲಿದೆ. ‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮಕ್ಕೂ ಇದರಿಂದ ಪ್ರಯೋಜನ ಲಭಿಸಲಿದೆ.
**
ಭಾರತದಲ್ಲಿ ಜವಳಿ ಉತ್ಪನ್ನ ತಯಾರಿಕಾ ಘಟಕ ಸ್ಥಾಪಿಸಲು ಹಲವಾರು ವಿದೇಶಿ ಕಂಪನಿಗಳು ಮುಂದೆ ಬರಲಿವೆ.
-ಎಂ. ಎಸ್.ಮಣಿ, ಡೆಲಾಯ್ಟ್ ಇಂಡಿಯಾ ಪಾರ್ಟನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.