ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಬಿಪಿಸಿಎಲ್) ಹೊಂದಿರುವ ಶೇಕಡ 52.98ರಷ್ಟು ಷೇರುಗಳನ್ನು ಮಾರಾಟ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.
ಜಾಗತಿಕ ಇಂಧನ ಮಾರುಕಟ್ಟೆಯ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಖಾಸಗೀಕರಣ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಬಹುತೇಕ ಬಿಡ್‌ದಾರರು ಹೇಳಿದ್ದಾರೆ. ಹೀಗಾಗಿ ಷೇರು ವಿಕ್ರಯವನ್ನು ಕೈಬಿಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಬಿಪಿಸಿಎಲ್‌ನಲ್ಲಿ ಹೊಂದಿರುವ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರವು ಖರೀದಿ ಆಸಕ್ತಿ ತಿಳಿಸುವಂತೆ 2020ರ ಮಾರ್ಚ್‌ನಲ್ಲಿ ಬಿಡ್ ಆಹ್ವಾನಿಸಿತ್ತು. 2020ರ ನವೆಂಬರ್ ವೇಳೆಗೆ ಮೂರು ಕಂಪನಿಗಳು ಬಿಡ್ ಸಲ್ಲಿಸಿದ್ದವು. ಆದರೆ, ಇಂಧನ ಬೆಲೆಯ ಬಗ್ಗೆ ಸ್ಪಷ್ಟತೆ ಸಿಗದೇ ಇರುವುದರಿಂದ ಎರಡು ಕಂಪನಿಗಳು ಬಿಡ್‌ನಿಂದ ಹೊರನಡೆದಿದ್ದು, ಕೇವಲ ಒಂದು ಕಂಪನಿ ಉಳಿದುಕೊಂಡಿದೆ. ಹೀಗಾಗಿ ಷೇರು ವಿಕ್ರಯ ಪ್ರಕ್ರಿಯೆ ಕೈಬಿಡಲು ಮತ್ತು ಖರೀದಿ ಆಸಕ್ತಿ ವ್ಯಕ್ತಪಡಿಸಿ ಸಲ್ಲಿಕೆ ಆಗಿರುವ ಬಿಡ್‌ಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಹೇಳಿದೆ.
ಕೋವಿಡ್ ಸಾಂಕ್ರಾಮಿಕ ಹಾಗೂ ಜಾಗತಿಕ ಬಿಕ್ಕಟ್ಟಿನಿಂದಾಗಿ ತೈಲ ಮತ್ತು ಅನಿಲ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಅದು ತಿಳಿಸಿದೆ.
ವೇದಾಂತ ಸಮೂಹ, ಅಮೆರಿಕದ ಅಪೋಲೊ ಗ್ಲೋಬಲ್ ಮ್ಯಾನೇಜ್‌ಮೆಂಟ್ ಮತ್ತು ಐ ಸ್ಕ್ವೇರ್ಡ್ ಕ್ಯಾಪಿಟಲ್ ಅಡ್ವೈಸರ್ಸ್ ಕಂಪನಿಗಳು ಬಿಪಿಸಿಎಲ್ ಖರೀದಿಸುವ ಬಗ್ಗೆ ಆಸಕ್ತಿ ತೋರಿ ಅರ್ಜಿ ಸಲ್ಲಿಸಿದ್ದವು.
ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಷೇರು ವಿಕ್ರಯ ಪ್ರಕ್ರಿಯೆಯನ್ನು ಮತ್ತೆ ಆರಂಭ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಇಲಾಖೆಯು ಹೇಳಿದೆ.
ಸರ್ಕಾರಿ ಸ್ವಾಮ್ಯದ ಎರಡನೇ ಅತಿದೊಡ್ಡ ತೈಲ ಮತ್ತು ಅನಿಲ ಕಂಪನಿಯು ಮುಂಬೈ, ಕೊಚ್ಚಿ, ಮಧ್ಯಪ್ರದೇಶದಲ್ಲಿ ತೈಲ ಸಂಸ್ಕರಣಾ ಘಟಕಗಳನ್ನು ಹೊಂದಿದೆ. ರಿಲಯನ್ಸ್ ಮತ್ತು ಇಂಡಿಯನ್ ಆಯಿಲ್ ಕಂಪನಿಗಳ ಬಳಿಕ ಅತಿ ಹೆಚ್ಚು ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಕಂಪನಿ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.