ನವದೆಹಲಿ: ಪ್ರಸ್ತುತ ವಿನಿಮಯ ದರದ ಆಧಾರದಲ್ಲಿ ಬಾಹ್ಯ ಸಾಲ ಸೇರಿದಂತೆ ಸರ್ಕಾರದ ಸಾಲದ ಮೊತ್ತವು 2024–25ರ ಹಣಕಾಸು ವರ್ಷದಲ್ಲಿ ₹185 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರವು ಅಂದಾಜಿಸಿದೆ. ಇದು ಜಿಡಿಪಿಯ ಶೇ 56.8ರಷ್ಟಾಗಿದೆ.
ಹಿಂದಿನ ಹಣಕಾಸು ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ಸಾಲವು ₹171 ಲಕ್ಷ ಕೋಟಿ (ಜಿಡಿಪಿಯ ಶೇ 58.2) ಆಗಿತ್ತು ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಕುಮಾರ್ ಚೌಧರಿ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2024ರ ಏಪ್ರಿಲ್‌ನಲ್ಲಿ ಪ್ರಕಟಿಸಿದ ವಿಶ್ವ ಆರ್ಥಿಕ ಮುನ್ನೋಟದ ಪ್ರಕಾರ, ಪ್ರಸ್ತುತ ದರಗಳ ಆಧಾರದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನವು 2023-24ರಲ್ಲಿ 3.57 ಟ್ರಿಲಿಯನ್ ಡಾಲರ್ (₹298 ಲಕ್ಷ ಕೋಟಿ) ತಲುಪಿದೆ ಎಂದು ಹೇಳಿದರು.
ಕುಟುಂಬಗಳು ಖರೀದಿ ಮೇಲೆ ಮಾಡುವ ವೆಚ್ಚವು (ಪಿಎಫ್‌ಸಿಇ) 2022–23 ಮತ್ತು 2023–24ರ ಹಣಕಾಸು ವರ್ಷಗಳಲ್ಲಿ ಕ್ರಮವಾಗಿ ಶೇ 6.8 ಮತ್ತು ಶೇ 4ರಷ್ಟು ಏರಿಕೆ ಆಗಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ತಾತ್ಕಾಲಿಕ ಜಿಡಿಪಿ ಅಂದಾಜನ್ನು ಉಲ್ಲೇಖಿಸಿ, ಚೌಧರಿ ಹೇಳಿದ್ದಾರೆ.
‘ಜಿಡಿಪಿಯ ಐದನೆಯ ಒಂದರಷ್ಟಾಗಲಿದೆ ಡಿಜಿಟಲ್ ಅರ್ಥವ್ಯವಸ್ಥೆ’
ಮುಂಬೈ (ಪಿಟಿಐ): ದೇಶದ ಡಿಜಿಟಲ್ ಅರ್ಥ ವ್ಯವಸ್ಥೆಯು 2026ರ ವೇಳೆಗೆ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಐದನೆಯ ಒಂದರಷ್ಟು ಆಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ವರದಿಯೊಂದು ಹೇಳಿದೆ. ಈಗ ಡಿಜಿಟಲ್ ಅರ್ಥ ವ್ಯವಸ್ಥೆಯ ಪಾಲು ಒಟ್ಟು ಜಿಡಿಪಿಯ ಹತ್ತನೆಯ ಒಂದರಷ್ಟು ಮಾತ್ರ ಇದೆ.
‘2023–24ನೆಯ ಸಾಲಿನ ಕರೆನ್ಸಿ ಮತ್ತು ಹಣಕಾಸಿನ ಕುರಿತ ವರದಿ’ ಹೆಸರಿನ ವರದಿಗೆ ಬರೆದಿರುವ ಮುನ್ನುಡಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಹಣಕಾಸಿನ ಡಿಜಿಟಲೀಕರಣವು ಮುಂದಿನ ತಲೆಮಾರಿನ ಬ್ಯಾಂಕಿಂಗ್ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತಿದೆ, ಹಣಕಾಸು ಸೇವೆಗಳು ಕೈಗೆಟಕುವ ವೆಚ್ಚಕ್ಕೆ ಸಿಗುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಪರಿವರ್ತನೆಗೆ ಹಲವು ಅಂಶಗಳು ನೆರವಾಗುತ್ತಿವೆ. ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣವು ಈಚಿನ ಮೂರು ವರ್ಷಗಳಲ್ಲಿ 19.9 ಕೋಟಿಯಷ್ಟು ಹೆಚ್ಚಾಗಿದೆ. ಭಾರತದಲ್ಲಿ ಪ್ರತಿ ಗೀಗಾಬೈಟ್ ಡೇಟಾ ಪಡೆಯಲು ಮಾಡಬೇಕಿರುವ ವೆಚ್ಚ ₹13.32 ಮಾತ್ರ, ಇದು ಜಗತ್ತಿನಲ್ಲಿ ಅತ್ಯಂತ ಕಡಿಮೆ ಮೊತ್ತ. ದೇಶದಲ್ಲಿ ಪ್ರತಿ ವ್ಯಕ್ತಿ ತಿಂಗಳಿಗೆ ಬಳಕೆ ಮಾಡುವ ಸರಾಸರಿ ಡೇಟಾ ಪ್ರಮಾಣ 24.1 ಜಿ.ಬಿಯಷ್ಟು ಇದೆ ಎಂದು ವರದಿ ಹೇಳಿದೆ.
ಡಿಜಿಟಲೀಕರಣವು ಸೈಬರ್ ಭದ್ರತೆ, ದತ್ತಾಂಶ ಸುರಕ್ಷತೆ ಸೇರಿದಂತೆ ಹಲವು ಆಯಾಮಗಳಲ್ಲಿ ಸವಾಲುಗಳನ್ನು ಕೂಡ ಒಡ್ಡಿದೆ ಎಂದು ದಾಸ್ ಅವರು ಹೇಳಿದ್ದಾರೆ.
ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್: 9,190 ಪ್ರಕರಣ ಪತ್ತೆ
ನವದೆಹಲಿ (ಪಿಟಿಐ): ಕೇಂದ್ರ ಜಿಎಸ್‌ಟಿ ಅಧಿಕಾರಿಗಳು 2023–24ರ ಹಣಕಾಸು ವರ್ಷದಲ್ಲಿ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ (ಐಟಿಸಿ) 9,190 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ, ಲೋಕಸಭೆಗೆ ಲಿಖಿತ ಉತ್ತರದಲ್ಲಿ ಸೋಮವಾರ ತಿಳಿಸಿದ್ದಾರೆ.
ನಕಲಿ ಇನ್‌ವಾಯ್ಸ್ ಸೃಷ್ಟಿಸಿ ₹36,374 ಕೋಟಿ ಮೊತ್ತದ ಜಿಎಸ್‌ಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 182 ಜನರನ್ನು ಬಂಧಿಸಲಾಗಿದೆ.
2022-23ರಲ್ಲಿ 7,231 ಪ್ರಕರಣ ದಾಖಲಾಗಿದ್ದು, ₹24,140 ಕೋಟಿ ನಕಲಿ ಐಟಿಸಿ ಪತ್ತೆಯಾಗಿದೆ. ಈ ಅವಧಿಯಲ್ಲಿ 152 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನಕಲಿ ಐಟಿಸಿ ವಂಚಕರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಕಾನೂನು ಜಾರಿ ಸಂಸ್ಥೆಗಳು ಸೇರಿದಂತೆ ಅನೇಕ ಮಧ್ಯಸ್ಥಗಾರರೊಂದಿಗಿನ ಸಮನ್ವಯದ ಮೂಲಕ ಇಂತಹ ಸವಾಲುಗಳನ್ನು ಎದುರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.