ನವದೆಹಲಿ: 2019–20ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಇದ್ದ ಗಡುವನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರವು, ಈ ವಿವರಗಳನ್ನು ಸಲ್ಲಿಸಲು ಜನವರಿ 10ರವರೆಗೆ ಅವಕಾಶ ನೀಡಿದೆ.
ತಮ್ಮ ಖಾತೆಗಳ ಲೆಕ್ಕ ಪರಿಶೋಧನೆ ನಡೆಸಬೇಕಿರುವ ಕಂಪನಿಗಳು ಹಾಗೂ ವ್ಯಕ್ತಿಗಳಿಗೆ ಫೆಬ್ರುವರಿ 15ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ಮೊದಲು, ವೈಯಕ್ತಿಕ ಆದಾಯ ತೆರಿಗೆ ವಿವರ ಸಲ್ಲಿಸಲು ಡಿಸೆಂಬರ್ 31, ಕಂಪನಿಗಳ ಆದಾಯ ತೆರಿಗೆ ವಿವರ ಸಲ್ಲಿಸಲು ಜನವರಿ 31 ಕಡೆಯ ದಿನವಾಗಿತ್ತು.
2019–20ನೇ ಸಾಲಿಗೆ ಸಂಬಂಧಿಸಿದಂತೆ 4.54 ಕೋಟಿಗಿಂತ ಹೆಚ್ಚಿನ ಆದಾಯ ತೆರಿಗೆ ವಿವರಗಳು ಡಿಸೆಂಬರ್ 28ರವರೆಗೆ ಸಲ್ಲಿಕೆಯಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 4.77 ಕೋಟಿ ವಿವರಗಳು ಸಲ್ಲಿಕೆಯಾಗಿದ್ದವು.
ಕೋವಿಡ್–19 ಸಾಂಕ್ರಾಮಿಕ ತಂದೊಡ್ಡಿರುವ ಸಮಸ್ಯೆಗಳು ನಿವಾರಣೆ ಆಗಿಲ್ಲದ ಕಾರಣ, ಗಡುವನ್ನು ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ನೇರ ತೆರಿಗೆ ವಿವಾದ ಇತ್ಯರ್ಥ ಯೋಜನೆಯಾದ ‘ವಿವಾದ್ ಸೆ ವಿಶ್ವಾಸ್’ ಅಡಿಯಲ್ಲಿ ಘೋಷಣೆ ಸಲ್ಲಿಸಲು ಜನವರಿ 31ರವರೆಗೆ ಅವಕಾಶ ನೀಡಲಾಗಿದೆ. 2019–20ನೇ ಸಾಲಿನ ವಾರ್ಷಿಕ ಜಿಎಸ್‌ಟಿ ವಿವರ ಸಲ್ಲಿಸಲು ಫೆಬ್ರುವರಿ 28ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.