ADVERTISEMENT

ಮೌಲ್ಯವರ್ಧನೆ ಮೂಲಕ ಟೊಮೆಟೊ ವೈನ್‌ ತಯಾರಿಕೆ: ಗ್ರಾಹಕ ವ್ಯವಹಾರಗಳ ಸಚಿವಾಲಯ

ಮೌಲ್ಯವರ್ಧನೆ: 28 ನವೋದ್ಯಮಗಳಿಗೆ ನೆರವು– ಕೇಂದ್ರ

ಪಿಟಿಐ
Published 22 ನವೆಂಬರ್ 2024, 15:39 IST
Last Updated 22 ನವೆಂಬರ್ 2024, 15:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಚಿಲ್ಲರೆ ಮಾರುಕಟ್ಟೆಯಲ್ಲಿನ ದರ ಏರಿಳಿತದಿಂದ ಟೊಮೆಟೊ ಬೆಳೆಗಾರರು ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ, ಟೊಮೆಟೊದಿಂದ ವೈನ್‌ ತಯಾರಿಕೆ ಸೇರಿದಂತೆ ಹೆಚ್ಚಿನ ಮೌಲ್ಯವರ್ಧನೆ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸಂಸ್ಕರಣಾ ಹಂತದಲ್ಲಿ ಟೊಮೆಟೊ ಪೂರೈಕೆಯನ್ನು ಸದೃಢಗೊಳಿಸುವ ಮೂಲಕ ವ್ಯಾಪಾರವನ್ನು ಉತ್ತಮಪಡಿಸಲಾಗುವುದು. ಮೌಲ್ಯವರ್ಧನೆಗೆ ಸಂಬಂಧಿಸಿದಂತೆ 28 ನವೋದ್ಯಮಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದೆ.

ಬೆಲೆ ಏರಿಕೆಗೆ ಕಡಿವಾಣ ಹಾಕಲು ಕಳೆದ ವರ್ಷದ ಜೂನ್‌ನಲ್ಲಿ ‘ಟೊಮೆಟೊ ಗ್ರ್ಯಾಂಡ್‌ ಚಾಲೆಂಜ್‌’ಗೆ (ಟಿಜಿಸಿ) ಚಾಲನೆ ನೀಡಲಾಗಿತ್ತು. ಟೊಮೆಟೊ ಪೂರೈಕೆ ಸರಪಳಿ ಸದೃಢಗೊಳಿಸುವಿಕೆ, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸರಕು ದೊರೆಯುವಂತೆ ಮಾಡುವುದು ಹಾಗೂ ಬೆಳೆಗಾರರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದೆ.

ADVERTISEMENT

‘ಕೇಂದ್ರ ಶಿಕ್ಷಣ ಸಚಿವಾಲಯದ (ನಾವೀನ್ಯ ಕೋಶ) ಸಹಭಾಗಿತ್ವದಡಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ಟಿಜಿಸಿ ರೂಪಿಸಿತ್ತು. ಮೌಲ್ಯವರ್ಧನೆ ಬಗ್ಗೆ ಹೊಸ ಕಲ್ಪನೆಗಳನ್ನು ಮಂಡಿಸಲು ವಿದ್ಯಾರ್ಥಿಗಳು, ಸಂಶೋಧನಾ ಸಂಸ್ಥೆಗಳು, ನವೋದ್ಯಮಗಳಿಗೆ ಆಹ್ವಾನ ನೀಡಲಾಗಿತ್ತು’ ಎಂದು ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.

‘ಒಟ್ಟು 1,376 ಹೊಸ ಕಲ್ಪನೆಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 423 ಯೋಜನೆಗಳನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ 28 ನವೋದ್ಯಮಗಳು ಮಂಡಿಸಿರುವ ಯೋಜನೆಗಳ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಈ ಪೈಕಿ 14 ನವೋದ್ಯಮಗಳು ಪೇಟೆಂಟ್ ಹೊಂದಿವೆ’ ಎಂದು ತಿಳಿಸಿದ್ದಾರೆ.

ಸಚಿವಾಯಲವು ಈ ನವೋದ್ಯಮಗಳಿಗೆ ಆರ್ಥಿಕ ನೆರವು ನೀಡಲಿದೆ. ಹೂಡಿಕೆದಾರರ ಭೇಟಿಗೂ ಅವಕಾಶ ಕಲ್ಪಿಸಲಿದೆ. ಇದರಿಂದ ಅವರ ವ್ಯಾಪಾರ ವಹಿವಾಟು ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ವಾರ್ಷಿಕ 20 ದಶಲಕ್ಷ ಟನ್‌ ಟೊಮೆಟೊ ಬೆಳೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.