ನವದೆಹಲಿ (ಪಿಟಿಐ): ಲ್ಯಾಪ್‌ಟಾಪ್, ಟ್ಯಾಬ್ ಹಾಗೂ ಕೆಲವು ಬಗೆಯ ಕಂಪ್ಯೂಟರ್‌ಗಳ ಆಮದಿನ ಮೇಲೆ ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧ ವಿಧಿಸಿದೆ. ನಿರ್ಬಂಧ ಜಾರಿಗೊಳಿಸಿರುವುದಕ್ಕೆ ಭದ್ರತೆಯ ಕಾರಣ ಕೂಡ ಇದೆ ಎಂದು ಕೇಂದ್ರ ಹೇಳಿದೆ.
ಇವುಗಳ ದೇಶಿ ಉತ್ಪಾದನೆಯನ್ನು ಉತ್ತೇಜಿಸುವುದು ನಿರ್ಬಂಧ ವಿಧಿಸಿರುವುದಕ್ಕೆ ಇನ್ನೊಂದು ಕಾರಣ ಎಂದು ಕೇಂದ್ರವು ತಿಳಿಸಿದೆ. ನಿರ್ಬಂಧಗಳ ಪರಿಣಾಮವಾಗಿ ಲ್ಯಾಪ್‌ಟಾಪ್, ಟ್ಯಾಬ್ ಮತ್ತು ಕೆಲವು ಬಗೆಯ ಕಂಪ್ಯೂಟರ್‌ಗಳು ಚೀನಾ ಹಾಗೂ ಕೊರಿಯಾದಂತಹ ದೇಶಗಳಿಂದ ಆಮದಾಗುವುದು ತಗ್ಗಲಿದೆ.
ಈ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವವರು ಇನ್ನು ಮುಂದೆ ಸರ್ಕಾರದ ಅನುಮತಿ ಅಥವಾ ಪರವಾನಗಿ ಪಡೆಯಬೇಕಾಗುತ್ತದೆ. ಆಮದಿಗೆ ನಿರ್ಬಂಧಗಳನ್ನು ವಿಧಿಸಿರುವುದರ ಹಿಂದೆ ಹಲವು ಕಾರಣಗಳಿದ್ದರೂ, ‘ನಮ್ಮ ಪ್ರಜೆಗಳ ಭದ್ರತೆಯನ್ನು ಖಾತರಿಪಡಿಸುವುದು ಪ್ರಮುಖ ಕಾರಣ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕೆಲವು ಹಾರ್ಡ್‌ವೇರ್‌ಗಳಲ್ಲಿ ಭದ್ರತೆಗೆ ಸಂಬಂಧಿಸಿದ ಲೋಪಗಳು ಇರಬಹುದು. ಅವು ಸೂಕ್ಷ್ಮ ಮಾಹಿತಿಯನ್ನು, ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಬಹುದು’ ಎಂದು ಅಧಿಕಾರಿ ಹೇಳಿದ್ದಾರೆ. ‘ಸುರಕ್ಷತೆಯು ನಮ್ಮ ಅತಿಮುಖ್ಯ ಆದ್ಯತೆ’ ಎಂದು ಹೇಳಿರುವ ಅಧಿಕಾರಿ, ಈ ಕ್ರಮವು ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ನಿಯಮಗಳಿಗೆ ಅನುಗುಣವಾಗಿಯೇ ಇದೆ ಎಂದಿದ್ದಾರೆ.
ಆಮದು ನಿರ್ಬಂಧಗಳಿಗೆ ಕೆಲವು ವಿನಾಯಿತಿಗಳು ಕೂಡ ಇವೆ ಎಂದು ವಿದೇಶ ವ್ಯಾಪಾರ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಹೇಳಿದೆ. ‘ಲ್ಯಾಪ್‌ಟಾಪ್, ಟ್ಯಾಬ್, ಆಲ್–ಇನ್–ವನ್ ಕಂಪ್ಯೂಟರ್, ಯುಎಸ್‌ಎಫ್‌ಎಫ್ ಕಂಪ್ಯೂಟರ್, ಸರ್ವರ್... ಇವೆಲ್ಲವುಗಳ ಆಮದಿನ ಮೇಲೆ ತಕ್ಷಣದಿಂದ ನಿರ್ಬಂಧ ವಿಧಿಸಲಾಗಿದೆ’ ಎಂದು ಡಿಜಿಎಫ್‌ಟಿ ಹೇಳಿದೆ.
ಈ ಉಪಕರಣಗಳನ್ನು ಆಮದು ಮಾಡುವವರು ಶುಕ್ರವಾರದಿಂದ (ಆಗಸ್ಟ್ 4) ಪರವಾನಗಿ ಪಡೆದುಕೊಳ್ಳಬೇಕು. ಪರವಾನಗಿ ಪಡೆಯಬೇಕು ಎಂದಾದರೆ ಆ ವರ್ತಕ, ಮೊದಲಿನಿಂದಲೂ ಆಮದು ವಹಿವಾಟಿನಲ್ಲಿ ತೊಡಗಿಸಿಕೊಂಡವ ಆಗಿರಬೇಕು.
‘ಆಮದನ್ನು ನಿಷೇಧಿಸುವ ಉದ್ದೇಶ ನಮ್ಮದಲ್ಲ. ಆದರೆ ಈ ಉಪಕರಣಗಳ ಆಮದಿನ ಮೇಲೆ ನಿಯಂತ್ರಣ ವಿಧಿಸುವ ಉದ್ದೇಶ ಇದೆ’ ಎಂದು ಅಧಿಕಾರಿ ಹೇಳಿದ್ದಾರೆ. ಈ ಕ್ರಮದಿಂದ ದೇಶಿ ಮಾರುಕಟ್ಟೆಯಲ್ಲಿ ಈ ಉಪಕರಣಗಳ ಬೆಲೆಯ ಮೇಲೆ ಪರಿಣಾಮ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಉದ್ಯಮದ ತಜ್ಞರು ಬೆಲೆ ಏರಿಕೆಯ ಅಪಾಯ ಇದೆ ಎಂದಿದ್ದಾರೆ.
ಲ್ಯಾಪ್‌ಟಾಪ್, ಟ್ಯಾಬ್, ಪರ್ಸನಲ್ ಕಂಪ್ಯೂಟರ್ ಅಥವಾ ಯುಎಸ್‌ಎಫ್‌ಎಫ್ ಕಂಪ್ಯೂಟರ್‌ಅನ್ನು ಒಂದಕ್ಕಿಂತ ಹೆಚ್ಚಿಲ್ಲದಂತೆ ಇ–ವಾಣಿಜ್ಯ ವೇದಿಕೆಗಳಿಂದ ಅಂಚೆ ಅಥವಾ ಕೊರಿಯರ್ ಮೂಲಕ ವಿದೇಶಗಳಿಂದ ತರಿಸಿಕೊಳ್ಳುವುದಿದ್ದರೆ ಅದಕ್ಕೆ ಪರವಾನಗಿಯ ಅಗತ್ಯ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.