ನವದೆಹಲಿ: ಸರ್ಕಾರಗಳು ನೀಡುವ ಸಬ್ಸಿಡಿ ಹಾಗೂ ಉಚಿತ ಕೊಡುಗೆಗಳು ಸಂದರ್ಭೋಚಿತವಾಗಿ ಇರಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪೂರಕ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಅವರು ಈ ಮಾತು ಹೇಳಿದ್ದಾರೆ. ‘ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾದರೆ, ಅದಕ್ಕೆ ಯಾರೂ ತಕರಾರು ಎತ್ತುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಆರೋಗ್ಯ, ಶಿಕ್ಷಣ ಮತ್ತು ಕೃಷಿಗೆ ನೀಡುವ ಸಬ್ಸಿಡಿಗಳಿಗೆ ಸಮರ್ಥನೆ ಇದೆ ಎಂದಿದ್ದಾರೆ. ಸಬ್ಸಿಡಿ ನೀಡುವ ವಿಚಾರದಲ್ಲಿ ತಾವು ಬಯಸುವುದು ‘ಪಾರದರ್ಶಕತೆ ಹಾಗೂ ಹಣಕಾಸಿಗೆ ಸಂಬಂಧಿಸಿದ ನಿಯಮಗಳ ಪಾಲನೆ ಮಾತ್ರ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರವು ಹಣದುಬ್ಬರದ ಮೇಲೆ ನಿಗಾ ಇರಿಸಿದೆ ಎಂದು ಅವರು ವಿವರಿಸಿದ್ದಾರೆ. ಪೂರಕ ಬೇಡಿಕೆಗಳನ್ನು ರಾಜ್ಯಸಭೆಯು, ಲೋಕಸಭೆಗೆ ಮರಳಿಸಿದೆ. ಈ ಮೂಲಕ ಕೇಂದ್ರಕ್ಕೆ ಹೆಚ್ಚುವರಿಯಾಗಿ ₹ 3.25 ಲಕ್ಷ ಕೋಟಿ ವೆಚ್ಚ ಮಾಡಲು ಅನುಮೋದನೆ ನೀಡಿದೆ.
‘ಸಾಲ ಮಾಡಿ ವೆಚ್ಚ ಮಾಡಿ, ನೋಟನ್ನು ಮುದ್ರಿಸಿ ಅರ್ಥ ವ್ಯವಸ್ಥೆಗೆ ಮತ್ತೆ ಚಾಲನೆ ನೀಡಿ ಎಂದು ಮಾಜಿ ಹಣಕಾಸು ಸಚಿವರೊಬ್ಬರು ಕೋವಿಡ್ ಸಂದರ್ಭದಲ್ಲಿ ಸಲಹೆ ನೀಡಿದ್ದರು. ಆದರೆ, ಇಂತಹ ಸಲಹೆಗಳನ್ನು ಅನುಸರಿಸಿದ್ದರಿಂದಾಗಿ ಬೇರೆ ದೇಶಗಳಲ್ಲಿ ಆಗಿರುವ ಕೆಟ್ಟ ಪರಿಣಾಮಗಳನ್ನೂ ನೋಡಬೇಕು. ಅವು ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ’ ಎಂದು ನಿರ್ಮಲಾ ಹೇಳಿದ್ದಾರೆ.
ಕೇಂದ್ರವು ಹೆಚ್ಚುವರಿಯಾಗಿ ಮಾಡಲಿರುವ ₹ 3.25 ಲಕ್ಷ ಕೋಟಿ ವೆಚ್ಚದಲ್ಲಿ ₹ 1.09 ಲಕ್ಷ ಕೋಟಿ ರಸಗೊಬ್ಬರ ಸಬ್ಸಿಡಿಗೆ ವಿನಿಯೋಗ ಆಗಲಿದೆ, ₹ 80,348 ಕೋಟಿಯು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ವೆಚ್ಚಕ್ಕೆ (ಮುಖ್ಯವಾಗಿ, ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ನೀಡಲು) ಬಳಕೆಯಾಗಲಿದೆ.
ತೈಲ ಮಾರಾಟ ಕಂಪನಿಗಳಿಗೆ ಎಲ್‌ಪಿಜಿ ಸಬ್ಸಿಡಿ ನೀಡಲು ಹಾಗೂ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಅಡಿ ಬಡವರಿಗೆ ಎಲ್‌ಪಿಜಿ ಸಂಪರ್ಕ ನೀಡಲು ₹ 29,944 ಕೋಟಿ ವೆಚ್ಚವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.