ನವದೆಹಲಿ: ಕೇಂದ್ರ ಸರ್ಕಾರವು ಭಾರತ್ ಬ್ರ್ಯಾಂಡ್‌ನಡಿ ಗೋಧಿ ಹಿಟ್ಟು ಮತ್ತು ಅಕ್ಕಿಯನ್ನು ರಿಯಾಯಿತಿ ದರದಲ್ಲಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಎರಡನೇ ಹಂತದ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿದೆ.
ಮೊದಲ ಹಂತಕ್ಕೆ ಹೋಲಿಸಿದರೆ, ಈ ಬಾರಿ ಅಕ್ಕಿ ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ಹೆಚ್ಚಿಸಿದೆ.
ಪ್ರಸ್ತುತ ಗೋಧಿ ಹಿಟ್ಟು ಪ್ರತಿ ಕೆ.ಜಿಗೆ ₹30, ಅಕ್ಕಿಗೆ ಕೆ.ಜಿಗೆ ₹34 ದರ ನಿಗದಿಪಡಿಸಿದೆ. ಆದರೆ, ಮೊದಲನೇ ಹಂತದಲ್ಲಿ ಗೋಧಿ ಹಿಟ್ಟು ಕೆ.ಜಿ ₹27.5 ಮತ್ತು ಅಕ್ಕಿ ಕೆ.ಜಿ ₹29 ಇತ್ತು.
ಪ್ರಸ್ತುತ ಅಕ್ಕಿ ಮತ್ತು ಗೋಧಿ ಹಿಟ್ಟು 5 ಕೆ.ಜಿ ಮತ್ತು 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ಲಭ್ಯವಿದ್ದು, ಗ್ರಾಹಕರಿಂದ ಬೇಡಿಕೆ ಬಂದರೆ, ಸಣ್ಣ ಗಾತ್ರದ ಪ್ಯಾಕೆಟ್‌ಗಳಲ್ಲಿ ಪೂರೈಸಲಾಗುವುದು. ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್), ಕೇಂದ್ರೀಯ ಭಂಡಾರ ಮತ್ತು ಇ–ಕಾಮರ್ಸ್ ವೇದಿಕೆಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ, ಸರ್ಕಾರವು 3.69 ಲಕ್ಷ ಟನ್ ಗೋಧಿ ಮತ್ತು 2.91 ಲಕ್ಷ ಟನ್ ಅಕ್ಕಿಯನ್ನು ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಬೆಲೆ ಸ್ಥಿರೀಕರಣ ನಿಧಿಯಡಿಯಲ್ಲಿ ಹಂಚಿಕೆ ಮಾಡಿದೆ. ದಾಸ್ತಾನು ಸಾಕಷ್ಟಿದೆ, ಅಗತ್ಯವಿದ್ದರೆ ಮತ್ತಷ್ಟು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರದ ಉದ್ದೇಶ ವ್ಯಾಪಾರ ಮಾಡುವುದಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವುದು ಮತ್ತು ಮಾರುಕಟ್ಟೆಯಲ್ಲಿ ದರ ಏರಿಕೆ ನಿಯಂತ್ರಿಸುವುದಾಗಿದೆ ಎಂದು ಹೇಳಿದ್ದಾರೆ.
2023ರ ಅಕ್ಟೋಬರ್‌ನಿಂದ 2024ರ ಜೂನ್‌ವರೆಗಿನ ಮೊದಲ ಹಂತದಲ್ಲಿ 15.20 ಲಕ್ಷ ಟನ್ ಗೋಧಿ ಹಿಟ್ಟು ಮತ್ತು 14.58 ಲಕ್ಷ ಟನ್ ಅಕ್ಕಿಯನ್ನು ಮಾರಾಟ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.