ADVERTISEMENT

Bharat Brand Phase-II: ಕೆ.ಜಿಗೆ ₹34ರಂತೆ ಅಕ್ಕಿ ಮಾರಾಟಕ್ಕೆ ಚಾಲನೆ

ಪಿಟಿಐ
Published 5 ನವೆಂಬರ್ 2024, 11:11 IST
Last Updated 5 ನವೆಂಬರ್ 2024, 11:11 IST
   

ನವದೆಹಲಿ: ಕೇಂದ್ರ ಸರ್ಕಾರವು ಭಾರತ್‌ ಬ್ರ್ಯಾಂಡ್‌ನಡಿ ರಿಯಾಯಿತಿ ದರದಲ್ಲಿ ಗೋಧಿ ಹಿಟ್ಟು ಮತ್ತು ಅಕ್ಕಿ ಮಾರಾಟದ ಎರಡನೇ ಹಂತಕ್ಕೆ ಮಂಗಳವಾರ ಚಾಲನೆ ನೀಡಿದೆ.

ಪ್ರಸ್ತುತ ಗೋಧಿ ಹಿಟ್ಟು ಪ್ರತಿ ಕೆ.ಜಿಗೆ ₹30 ದರ ಇದ್ದರೆ, ಅಕ್ಕಿ ದರ ಕೆ.ಜಿಗೆ ₹34ರಂತೆ ಮಾರಾಟ ಮಾಡಲಿದೆ. ಆದರೆ, ಮೊದಲನೇ ಹಂತದಲ್ಲಿ ಗೋಧಿ ಹಿಟ್ಟು ಕೆ.ಜಿ ₹27 ಮತ್ತು ಅಕ್ಕಿ ಕೆ.ಜಿ ₹29 ಇತ್ತು. ಇದಕ್ಕೆ ಹೋಲಿಸಿದರೆ ಎರಡನೇ ಹಂತದಲ್ಲಿ ಬೆಲೆಯು ಏರಿಕೆಯಾಗಿದೆ.

ಪ್ರಸ್ತುತ ಅಕ್ಕಿ ಮತ್ತು ಗೋಧಿ ಹಿಟ್ಟು 5 ಕೆ.ಜಿ ಮತ್ತು 10 ಕೆ.ಜಿಗೆ ಪ್ಯಾಕೆಟ್‌ಗಳಲ್ಲಿ ಲಭ್ಯವಿದ್ದು, ಗ್ರಾಹಕರಿಂದ ಬೇಡಿಕೆ ಬಂದರೆ, ಸಣ್ಣ ಗಾತ್ರದ ಪ್ಯಾಕೆಟ್‌ಗಳಲ್ಲಿ ಪೂರೈಸಲಾಗುವುದು. ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್‌), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್), ಕೇಂದ್ರೀಯ ಭಂಡಾರ ಮತ್ತು ಇ–ಕಾಮರ್ಸ್‌ ವೇದಿಕೆಗಳಲ್ಲಿ ಮೂಲಕ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ADVERTISEMENT

ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ, ಸರ್ಕಾರವು 3.69 ಲಕ್ಷ ಟನ್‌ ಗೋಧಿ ಮತ್ತು 2.91 ಲಕ್ಷ ಟನ್‌ ಅಕ್ಕಿಯನ್ನು ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಬೆಲೆ ಸ್ಥಿರೀಕರಣ ನಿಧಿಯಡಿಯಲ್ಲಿ ಎರಡನೇ ಹಂತದಲ್ಲಿ ಹಂಚಿಕೆ ಮಾಡಿದೆ. ದಾಸ್ತಾನು ಸಾಕಷ್ಟಿದೆ,  ಅಗತ್ಯವಿದ್ದರೆ ಮತ್ತಷ್ಟು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರದ ಉದ್ದೇಶ ವ್ಯಾಪಾರ ಮಾಡುವುದಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವುದು ಮತ್ತು ಮಾರುಕಟ್ಟೆಯಲ್ಲಿ ದರ ಏರಿಕೆ ನಿಯಂತ್ರಿಸುವುದಾಗಿದೆ ಎಂದು ಹೇಳಿದ್ದಾರೆ.

2023ರ ಅಕ್ಟೋಬರ್‌ನಿಂದ 2024ರ ಜೂನ್‌ವರಿಗಿನ ಮೊದಲ ಹಂತದಲ್ಲಿ 15.20 ಲಕ್ಷ ಟನ್‌ ಗೋಧಿಹಿಟ್ಟು ಮತ್ತು 14.58 ಲಕ್ಷ ಟನ್‌ ಅಕ್ಕಿಯನ್ನು ಮಾರಾಟ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.