ADVERTISEMENT

‘ಪಿಎಂ ಇ–ಡ್ರೈವ್‌’ಗೆ ಚಾಲನೆ: ಯೋಜನೆಗೆ ₹10,900 ಕೋಟಿ ನಿಗದಿ

ಪಿಟಿಐ
Published 1 ಅಕ್ಟೋಬರ್ 2024, 15:45 IST
Last Updated 1 ಅಕ್ಟೋಬರ್ 2024, 15:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೂಪಿಸಿರುವ ‘ಪಿಎಂ ಇ–ಡ್ರೈವ್‌’ ಯೋಜನೆಗೆ ಕೇಂದ್ರ ಸರ್ಕಾರ  ಮಂಗಳವಾರ ಚಾಲನೆ ನೀಡಿದೆ. 

ವಿದ್ಯುತ್‌ ಚಾಲಿತ ವಾಹನಗಳ ತ್ವರಿತ ಬಳಕೆ, ಚಾರ್ಜಿಂಗ್‌ ಕೇಂದ್ರಗಳ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಇ–ವಾಹನ ತಯಾರಿಕೆಗೆ ಒತ್ತು ನೀಡಲು ಯೋಜನೆಯಡಿ ₹10,900 ಕೋಟಿ ಮೀಸಲಿಟ್ಟಿದೆ. ಪ್ರಸಕ್ತ ವರ್ಷದ ಅಕ್ಟೋಬರ್‌ 1ರಿಂದ 2026ರ ಮಾರ್ಚ್‌ 31ರ ವರೆಗೆ ಯೋಜನೆಯು ಜಾರಿಯಲ್ಲಿ ಇರಲಿದೆ.

ಇದರಡಿ ಇಎಂಪಿಎಸ್–2024 (ಎಲೆಕ್ಟ್ರಿಕ್ ಮೊಬಿಲಿಟಿ ಪ್ರಚಾರ ಯೋಜನೆ) ಅನ್ನು ಅನುಷ್ಠಾನಗೊಳಿಸಲಾಗಿದೆ.

ADVERTISEMENT

‘ಫೇಮ್‌’ ಬದಲು ಜಾರಿಗೊಂಡಿರುವ ಈ ಯೋಜನೆಯಡಿ ಗ್ರಾಹಕರಿಗೆ ಸಬ್ಸಿಡಿ ಪ್ರಯೋಜನ ಸಿಗಲಿದೆ. ಈ ಸಂಬಂಧ ಇ–ವೋಚರ್‌ ನೀಡಲು ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಗುವುದು’ ಎಂದು ಕೇಂದ್ರ ಬೃಹತ್‌ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಹನೀಫ್ ಖುರೇಷಿ ತಿಳಿಸಿದ್ದಾರೆ. 

‘ಒಂದು ಆಧಾರ್‌ ಸಂಖ್ಯೆಗೆ ಒಂದು ವಾಹನಕ್ಕಷ್ಟೇ ಸಬ್ಸಿಡಿಗೆ ಅನುಮತಿ ನೀಡಲಾಗಿದೆ. ಯೋಜನೆಯಡಿ ವಿದ್ಯುತ್ ಚಾಲಿತ ವಾಹನಗಳ ಪರೀಕ್ಷಾ ಸೌಲಭ್ಯವನ್ನು ಮೇಲ್ದರ್ಜೆಗೇರಿಸಲು ₹780 ಕೋಟಿ ನಿಗದಿಪಡಿಸಲಾಗಿದೆ’ ಎಂದು ವಿವರಿಸಿದ್ದಾರೆ. 

ಇ–ದ್ವಿಚಕ್ರವಾಹನ, ಇ–ತ್ರಿಚಕ್ರವಾಹನ, ಇ–ಆಂಬುಲೆನ್ಸ್‌, ಇ–ಟ್ರಕ್‌ಗಳಿಗೆ ಸಬ್ಸಿಡಿ ನೀಡಲು ₹3,679 ಕೋಟಿ ಮೀಸಲಿಡಲಾಗಿದೆ. ಒಟ್ಟು 24.79 ಲಕ್ಷ ದ್ವಿಚಕ್ರವಾಹನ, 3.16 ಲಕ್ಷ ತ್ರಿಚಕ್ರವಾಹನ ಹಾಗೂ 14,028 ಇ–ಬಸ್‌ಗಳಿಗೆ ಸಬ್ಸಿಡಿ ದೊರೆಯಲಿದೆ. 

ಯೋಜನೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ₹2 ಸಾವಿರ ಕೋಟಿ ಮೀಸಲಿಡಲಾಗಿದೆ.

ವಾಹನ ತಯಾರಿಸುವ ಕಂಪನಿಗಳು ‘ಪಿಎಂ ಇ–ಡ್ರೈವ್‌’ನ ಪ್ರಯೋಜನ ಪಡೆಯಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ‍‍ಪಾಲಿಸಬೇಕಿದೆ
ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ
ಇ–ಸ್ಕೂಟರ್‌ಗೆ ₹10 ಸಾವಿರ ಸಬ್ಸಿಡಿ
‘ಪಿಎಂ ಇ–ಡ್ರೈವ್‌’ ಯೋಜನೆಯಡಿ ಎಲೆಕ್ಟ್ರಿಕ್‌ ದ್ವಿಚಕ್ರವಾಹನಗಳಿಗೆ ಅವುಗಳ ಬ್ಯಾಟರಿ ಸಾಮರ್ಥ್ಯ ಆಧಾರದ ಮೇಲೆ ಸಬ್ಸಿಡಿ ದೊರೆಯಲಿದೆ. ಪ್ರತಿ ಕೆಡಬ್ಲ್ಯುಎಚ್‌ಗೆ ₹5 ಸಾವಿರ ನಿಗದಿಪಡಿಸಲಾಗಿದೆ. ಮೊದಲ ವರ್ಷದಲ್ಲಿ ಗರಿಷ್ಠ ಸಬ್ಸಿಡಿ ₹10 ಸಾವಿರ ದಾಟುವಂತಿಲ್ಲ. ಎರಡನೇ ವರ್ಷದಲ್ಲಿ ಪ್ರತಿ ಕೆಡಬ್ಲ್ಯುಎಚ್‌ಗೆ ₹2500 ಪಾವತಿಸಲಾಗುತ್ತದೆ. ಈ ಮೊತ್ತವು ₹5 ಸಾವಿರ ದಾಟುವಂತಿಲ್ಲ. ಇ–ಆಟೊರಿಕ್ಷಾ ಸೇರಿ ತ್ರಿಚಕ್ರವಾಹನಗಳಿಗೆ ಮೊದಲ ವರ್ಷ ₹25 ಸಾವಿರ ಹಾಗೂ ಎರಡನೇ ವರ್ಷದಲ್ಲಿ ₹12500 ಸಬ್ಸಿಡಿ ದೊರೆಯಲಿದೆ.  ಎಲ್‌5 ವರ್ಗಕ್ಕೆ ಸೇರಿದ (ಸರಕು ಸಾಗಣೆ ತ್ರಿಚಕ್ರವಾಹನ) ವಾಹನಗಳಿಗೆ ಪ್ರಥಮ ವರ್ಷ ₹50 ಸಾವಿರ ಹಾಗೂ ದ್ವಿತೀಯ ವರ್ಷದಲ್ಲಿ ₹25 ಸಾವಿರ ಸಬ್ಸಿಡಿ ಸಿಗಲಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ ತಯಾರಿಸುವ ಓಲಾ ಟಿವಿಎಸ್‌ ಅಥೆರ್‌ ಎನರ್ಜಿ ಹೀರೊ ವಿದಾ (ಹೀರೊ ಮೋಟೊಕಾರ್ಪ್‌) ಮತ್ತು ಚೇತಕ್‌ ಬಜಾಜ್‌ನ ಬ್ಯಾಟರಿ ಸಾಮರ್ಥ್ಯ 2.88ರಿಂದ 4 ಕೆಡಬ್ಲ್ಯುಎಚ್‌ ಇದೆ. ಇವುಗಳ ಬೆಲೆ ₹90 ಸಾವಿರದಿಂದ ₹1.5 ಲಕ್ಷ ಇದೆ.
ಇ–ವೋಚರ್‌ ಪಡೆಯುವುದು ಹೇಗೆ?
‘ಪಿಎಂ ಇ–ಡ್ರೈವ್‌’ ಪೋರ್ಟಲ್‌ ಮೂಲಕ ಆಧಾರ್ ಸಂಖ್ಯೆ ದೃಢೀಕೃತ ಇ–ವೋಚರ್‌ ನೀಡಲಾಗುತ್ತದೆ. ವಾಹನ ಖರೀದಿ ಬಳಿಕ ಖರೀದಿದಾರ  ನೋಂದಣಿ ಮಾಡಿರುವ ಮೊಬೈಲ್‌ಗೆ ಇ–ವೋಚರ್‌ ರವಾನೆಯಾಗಲಿದೆ. ಇದಕ್ಕೆ ಆತ ಖರೀದಿದಾರ ಸಹಿ ಮಾಡಿ ಡೀಲರ್‌ಗೆ ಸಲ್ಲಿಸಬೇಕಿದೆ.  ಬಳಿಕ ಡೀಲರ್‌ ಕೂಡ ಸಹಿ ಮಾಡಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ. ಸಬ್ಸಿಡಿ ಪಡೆಯಲು ಈ ಇಬ್ಬರು ವೋಚರ್‌ಗೆ ಸಹಿ ಮಾಡಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.