ನವದೆಹಲಿ: ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿಗೆ ವಿಧಿಸಿದ್ದ ನಿಷೇಧವನ್ನು ಶನಿವಾರ ಹಿಂಪಡೆದಿದೆ. ಆದರೆ, ಕನಿಷ್ಠ ರಫ್ತು ದರವನ್ನು (ಎಂಇಪಿ) ಪ್ರತಿ ಟನ್‌ಗೆ ₹45,860ಕ್ಕೆ (550 ಡಾಲರ್) ನಿಗದಿಪಡಿಸಿದೆ.
ಬೆಲೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರ ಪಾಲಿಗೆ ಸರ್ಕಾರದ ಈ ನಿರ್ಧಾರವು ವರದಾನವಾಗಿದೆ.
ಸರ್ಕಾರವು ರಫ್ತು ನಿರ್ಬಂಧಿಸುವ ಉದ್ದೇಶದಿಂದ ‘ಕನಿಷ್ಠ ರಫ್ತು ದರ’ ವಿಧಿಸುವ ಮಾರ್ಗವನ್ನು ಅನುಸರಿಸುತ್ತದೆ. ಜೊತೆಗೆ, ಪರಿಣಾಮಕಾರಿಯಾಗಿ ಈರುಳ್ಳಿ ರಫ್ತು ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇ 40ರಷ್ಟು ಸುಂಕ ವಿಧಿಸಿತ್ತು.
ಅದೇ ವರ್ಷದ ಡಿಸೆಂಬರ್ 31ರ ವರೆಗೆ ಈ ಆದೇಶ ಜಾರಿಯಲ್ಲಿತ್ತು. ಮತ್ತೆ ಇಷ್ಟೇ ಪ್ರಮಾಣದಲ್ಲಿ ಸುಂಕ ವಿಧಿಸಿದ್ದು, ಶುಕ್ರವಾರದಿಂದಲೇ ಜಾರಿಗೆ ಬಂದಿದೆ.
‘ಈರುಳ್ಳಿ ರಫ್ತಿಗೆ ಹೇರಿದ್ದ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆಯಲಾಗಿದೆ. ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರುತ್ತದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಬರುವ ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.
‘ಸದ್ಯ ಈರುಳ್ಳಿ ಮಂಡಿಗಳು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಸ್ಥಿರವಾಗಿದೆ. ಅಲ್ಪ ಪ್ರಮಾಣದಲ್ಲಿ ದರ ಏರಿಕೆ ಆಗಬಹುದು. ಆದರೆ, ಗ್ರಾಹಕರು ಮತ್ತು ರೈತರ ಹಿತದೃಷ್ಟಿಯಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ’ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.
‘ಅತಿಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರಕ್ಕೆ ಇತ್ತೀಚೆಗೆ ಸಚಿವಾಲಯದ ತಜ್ಞರ ತಂಡವು ಭೇಟಿ ನೀಡಿತ್ತು. ಈರುಳ್ಳಿಯನ್ನು ದೀರ್ಘಕಾಲದವರೆಗೆ ಶೇಖರಿಸಿಡಲು ಆಗುವುದಿಲ್ಲ. ಮಧ್ಯಸ್ಥಗಾರರು ಮತ್ತು ತಂಡದ ಶಿಫಾರಸ್ಸಿನ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು 5 ಲಕ್ಷ ಟನ್ ಕಾಪು ದಾಸ್ತಾನು ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಕಳೆದ ತಿಂಗಳು ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಯುಎಇ, ಭೂತಾನ್, ಬಹರೈನ್, ಮಾರಿಷಸ್ ಹಾಗೂ ಶ್ರೀಲಂಕಾಕ್ಕೆ ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.
ಕ್ವಿಂಟಲ್‌ಗೆ ₹200 ದರ ಹೆಚ್ಚಳ
ನವದೆಹಲಿ: ರಫ್ತು ನಿಷೇಧವನ್ನು ವಾಪಸ್ ಪಡೆದಿರುವ ಬೆನ್ನಲ್ಲೇ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಲಾಸಲ್‌ಗಾಂವ್ ಎಪಿಎಂಸಿಯಲ್ಲಿ ಶನಿವಾರ ಪ್ರತಿ ಕ್ವಿಂಟಲ್ ಈರುಳ್ಳಿ ದರವು ಸರಾಸರಿ ₹200 ಹೆಚ್ಚಳವಾಗಿದೆ. ಲಾಸಲ್‌ಗಾಂವ್ ದೇಶದ ಅತಿದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆಯಾಗಿದೆ. ಇಲ್ಲಿನ ಗುಣಮಟ್ಟದ ಆಧಾರದ ಪ್ರತಿ ಕ್ವಿಂಟಲ್‌ಗೆ ₹801ರಿಂದ ₹2551ರ ವರೆಗೆ ದರವಿದೆ.
‘ಸರ್ಕಾರದ ನಿರ್ಧಾರದಿಂದ ರೈತರಿಗೆ ಅನುಕೂಲವಾಗಲಿದೆ. ಆದರೆ ಸೋಮವಾರದಂದು ಇದರ ನೈಜ ಚಿತ್ರಣ ದೊರೆಯಲಿದೆ’ ಎಂದು ಎಪಿಎಂಸಿ ಅಧ್ಯಕ್ಷ ಬಾಳಾಸಾಹೇಬ ಕ್ಷೀರಸಾಗರ್ ತಿಳಿಸಿದ್ದಾರೆ. ‘ಸರ್ಕಾರದ ಈ ಆದೇಶವು ಕನಿಷ್ಠ ಒಂದು ವರ್ಷದ ವರೆಗೆ ಜಾರಿಯಲ್ಲಿದ್ದರೆ ಅನುಕೂಲವಾಗಲಿದೆ. ಆದರೆ ನಿಗದಿಪಡಿಸಿರುವ ರಫ್ತು ಸುಂಕವು ಬೆಳೆಗಾರರ ಲಾಭವನ್ನು ನುಂಗಿ ಹಾಕಲಿದೆ’ ಎಂದು ರೈತರು ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ 8ರಂದು ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿಗೆ ಪ್ರಸಕ್ತ ವರ್ಷದ ಮಾರ್ಚ್ 31ರ ವರೆಗೆ ನಿಷೇಧ ಹೇರಿತ್ತು. ಆ ನಂತರ ನಿಷೇಧವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಈ ಕ್ರಮ ಕೈಗೊಂಡಿತ್ತು. ಕೇಂದ್ರದ ಈ ಕ್ರಮದ ವಿರುದ್ಧ ಮಹಾರಾಷ್ಟ್ರದಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸಿದ್ದರು. ಬೆಳೆಗಾರರ ಹಿತದೃಷ್ಟಿಯಿಂದ ಕೂಡಲೇ ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದರು. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವ ನಾಸಿಕ್ ಅಹಮದಾಬಾದ್ ಸೊಲ್ಲಾಪುರದಲ್ಲಿ ಮೂರನೇ ಹಂತದಲ್ಲಿ ಲೋಕಸಭೆಗೆ ಮತದಾನ ನಡೆಯುತ್ತಿದೆ. ಈ ಭಾಗದ ರೈತರ ಮತಗಳ ಮೇಲೆ ಕಣ್ಣಿಟ್ಟಿರುವ ಕೇಂದ್ರವು ರಫ್ತು ನಿಷೇಧವನ್ನು ವಾಪಸ್ ಪಡೆದಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.