ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಐ.ಟಿ ಕಂಪನಿ ಇನ್ಫೊಸಿಸ್ ಮೇಲಿರುವ ₹33,500 ಕೋಟಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ವಂಚನೆ ಆರೋಪ ಪ್ರಕರಣವನ್ನು ಕೇಂದ್ರ ಸರ್ಕಾರವು ಕೈಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ತನ್ನ ಸಾಗರೋತ್ತರ ಶಾಖೆಗಳ ಸೇವೆಗೆ ಸಂಬಂಧಿಸಿದಂತೆ ಇನ್ಫೊಸಿಸ್ ಕಂಪನಿಯು ಜಿಎಸ್‌ಟಿ ವಂಚನೆ ಎಸಗಿದ ಆರೋಪ ಹೊತ್ತಿದೆ. ಈ ಸಂಬಂಧ ಕರ್ನಾಟಕದ ಜಿಎಸ್‌ಟಿ ವಿಭಾಗದಿಂದ ಕಂಪನಿಗೆ ನೋಟಿಸ್ ನೀಡಲಾಗಿತ್ತು. ಈ ಪ್ರಕರಣವನ್ನು ಕೇಂದ್ರ ಮಟ್ಟದ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯಕ್ಕೆ (ಡಿಜಿಜಿಐ) ವರ್ಗಾಯಿಸಲಾಗಿತ್ತು.
ಕೇಂದ್ರ ಸರ್ಕಾರವು ತೆರಿಗೆ ರಿಯಾಯಿತಿ ಸೌಲಭ್ಯ ನೀಡುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಸರ್ಕಾರದ ಈ ಕ್ರಮ ಕುರಿತು ತಂತ್ರಾಂಶ ಸೇವಾ ಉದ್ಯಮದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಸರ್ಕಾರದ ನಿರ್ಧಾರವನ್ನು 'ಅತಿರೇಕ‘ ಹಾಗೂ ‘ತೆರಿಗೆ ಭಯೋತ್ಪಾದನೆಗೆ ಉದಾಹರಣೆ’ ಎಂದು ಇನ್ಫೊಸಿಸ್‌ನ ಆಡಳಿತ ಮಂಡಳಿ ಸದಸ್ಯ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಮೋಹನದಾಸ್ ಪೈ ಜರಿದಿದ್ದರು.
ಕಂಪನಿಯ ಹಣಕಾಸು ವಿಭಾಗದ ಉಪಾಧ್ಯಕ್ಷ ಸುನಿಲ್ ಕುಮಾರ್ ಧಾರೇಶ್ವರ್ ಅವರು ಕಳೆದ ವಾರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಇನ್ಫೊಸಿಸ್‌ನ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ತಂತ್ರಾಂಶ ಮತ್ತು ಸೇವಾ ವಲಯದ ರಾಷ್ಟ್ರೀಯ ಒಕ್ಕೂಟವು ಒತ್ತಾಯಿಸಿತ್ತು. ಜತೆಗೆ, ಇಂಥ ನೋಟಿಸ್‌ಗಳು ಉದ್ಯಮದಲ್ಲಿ ಅಸ್ಥಿರತೆ ಸೃಷ್ಟಿಸಬಾರದು ಹಾಗೂ ಭಾರತದ ಉದ್ಯಮ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಿರಬಾರದು ಎಂದಿತ್ತು.
ಈ ಸಂಬಂಧ ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಜಿಎಸ್‌ಟಿ ಸಮಿತಿಯ ಸಭೆ ನಡೆದಿದ್ದು, ಇದರ ತೀರ್ಮಾನವನ್ನು ಅಧಿಕೃತವಾಗಿ ಸೆ. 9ರಂದು ಘೋಷಿಸುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಕರಣದ ಹಿನ್ನೆಲೆ: 2017ರ ಜುಲೈನಿಂದ 2021–22ರ ವರೆಗೆ ಇನ್ಪೊಸಿಸ್ ಇಷ್ಟು ಮೊತ್ತದ ವಂಚನೆ ಎಸಗಿರುವ ಆರೋಪವಿದೆ. ಈ ಮೊತ್ತವು 2024-25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ಗಳಿಸಿರುವ ವರಮಾನದ ಶೇ 85ರಷ್ಟಿದೆ.
ಷೇರು ಪೇಟೆಗೆ ಆ. 3ರಂದು ಕಂಪನಿ ಸಲ್ಲಿಸಿದ ಮಾಹಿತಿ ಪ್ರಕಾರ, ಆರ್ಥಿಕ ವರ್ಷ 2017–18ರ ತೆರಿಗೆಗೆ ಸಂಬಂಧಿಸಿದಂತೆ ₹38.98 ಶತಕೋಟಿ ಮೊತ್ತಕ್ಕೆ ಅಂತಿಮಗೊಳಿಸಲಾಗಿತ್ತು ಎಂದಿದೆ. ಕೇಂದ್ರ ಹಾಗೂ ರಾಜ್ಯಗಳಿಗೆ ಸಂಬಂಧಿಸಿದಂತೆ ಇದ್ದ ಎಲ್ಲಾ ಬಾಕಿಯನ್ನೂ ಪಾವತಿಸಲಾಗಿದೆ ಎಂದೂ ಕಂಪನಿ ಈ ಹಿಂದೆ ಹೇಳಿತ್ತು ಎಂದು ವರದಿಯಾಗಿದೆ.
ದೇಶದ 2ನೇ ಅತಿ ದೊಡ್ಡ ಐಟಿ ಕಂಪನಿಯಾಗಿರುವ ಇನ್ಫೊಸಿಸ್‌ಗೆ ಜಿಎಸ್‌ಟಿ ಕಾನೂನು ಅಡಿಯಲ್ಲಿ ನೋಟಿಸ್ ನೀಡಲಾಗಿತ್ತು. ಇದಕ್ಕೆ ಉತ್ತರಿಸಲು ಕಂಪನಿ 10 ದಿನಗಳ ಕಾಲಾವಕಾಶ ಕೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.