ನವದೆಹಲಿ: 2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೃಷಿ ಸಾಲ ನೀಡಿಕೆ ಗುರಿಯನ್ನು ಈ ಬಾರಿಯ ಬಜೆಟ್‌ನಲ್ಲಿ ₹ 19 ಲಕ್ಷ ಕೋಟಿಗೆ ಹೆಚ್ಚಿಸುವ ಸಾಧ್ಯತೆ ಇದೆ.
ಹಾಲಿ ಆರ್ಥಿಕ ವರ್ಷದಲ್ಲಿ ಒಟ್ಟು ₹ 15 ಲಕ್ಷ ಕೋಟಿ ಕೃಷಿ ಸಾಲ ನೀಡುವ ಗುರಿಯನ್ನು 2020ರಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ನಿಗದಿ ಮಾಡಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರವು ಪ್ರತಿ ವರ್ಷವೂ ಸಾಲ ನೀಡುವ ಗುರಿಯನ್ನು ಹೆಚ್ಚಿಸುತ್ತಿದೆ.
‘ಕೃಷಿ ಕ್ಷೇತ್ರಕ್ಕೆ ಸಾಲ ನೀಡುವ ಕಾರ್ಯದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಹಾಗೂ ಸಹಕಾರ ಸಂಘಗಳು ಹೆಚ್ಚು ಸಕ್ರಿಯವಾಗಿವೆ. ನಬಾರ್ಡ್ ಮರುಸಾಲ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020–21ನೇ ಸಾಲಿನ ಬಜೆಟ್ ಮಂಡಿಸುವಾಗ ಹೇಳಿದ್ದರು.
‘ರೈತರ ಉತ್ಪಾದನೆ ಹೆಚ್ಚಿಸುವಲ್ಲಿ ಬಹುಮುಖ್ಯವಾದುದು ಕೃಷಿ ಸಾಲ. ಸಾಂಸ್ಥಿಕ ಮೂಲಗಳಿಂದ ರೈತರಿಗೆ ಹೆಚ್ಚಿನ ಸಾಲ ಸಿಗುವಂತೆ ಮಾಡಿದರೆ, ಹೆಚ್ಚಿನ ಬಡ್ಡಿದರಕ್ಕೆ ಅವರು ಬೇರೆ ಕಡೆ ಸಾಲ ಮಾಡುವುದು ತಪ್ಪುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.