ನವದೆಹಲಿ: ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಅನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಕೇಂದ್ರ ಸರ್ಕಾರವು ಡಿಸೆಂಬರ್ ತ್ರೈಮಾಸಿಕದಲ್ಲಿ ಹಣಕಾಸಿನ ಬಿಡ್ ಆಹ್ವಾನಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಇಎಂಎಲ್ ಲಿಮಿಟೆಡ್‌ನ ಭೂಮಿ ಮತ್ತು ಪ್ರಮುಖವಲ್ಲದ ಆಸ್ತಿಗಳನ್ನು ಪ್ರತ್ಯೇಕಿಸಿ ಬಿಇಎಂಎಲ್ ಲ್ಯಾಂಡ್ ಅಸೆಟ್ಸ್ ಲಿಮಿಟೆಡ್ ಅನ್ನು ರೂಪಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈಗಾಗಲೇ ಒಪ್ಪಿಗೆ ನೀಡಿದೆ.
ಬಿಇಎಂಎಲ್‌ನ ಪ್ರತಿಯೊಬ್ಬ ಷೇರುದಾರರು ಬಿಇಎಂಎಲ್ ಲ್ಯಾಂಡ್ ಅಸೆಟ್ಸ್‌ನಲ್ಲಿ ಷೇರುಪಾಲು ಹೊಂದಲಿದ್ದಾರೆ. ಸೆಪ್ಟೆಂಬರ್ ಅಂತ್ಯದ ಒಳಗಾಗಿ ಅಥವಾ ಅಕ್ಟೋಬರ್ ತಿಂಗಳ ಆರಂಭದೊಳಗೆ ಪ್ರತ್ಯೇಕಿಸುವ ಕೆಲಸ ಪೂರ್ಣಗೊಳ್ಳಲಿದೆ. ಆ ಬಳಿಕ ಹಣಕಾಸಿನ ಬಿಡ್ ಆಹ್ವಾನಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಬಿಇಎಂಎಲ್‌ನಲ್ಲಿ ಸದ್ಯ ಶೇ 54.03ರಷ್ಟು ಷೇರುಪಾಲು ಹೊಂದಿದೆ. ಕಂಪನಿಯ ಆಡಳಿತ ನಿರ್ವಹಣೆಯ ಅಧಿಕಾರದ ಜೊತೆಗೆ ಶೇಕಡ 26ರಷ್ಟು ಷೇರುಗಳನ್ನು ಖರೀದಿಸಲು ಆಸಕ್ತಿ ತೋರಿಸಿ ಪ್ರಾಥಮಿಕ ಬಿಡ್ ಸಲ್ಲಿಸುವಂತೆ ಕೇಂದ್ರ ಸರ್ಕಾರವು ಕಳೆದ ವರ್ಷದ ಜನವರಿಯಲ್ಲಿ ಆಹ್ವಾನಿಸಿತ್ತು. ಖರೀದಿಸುವ ಆಸಕ್ತಿ ವ್ಯಕ್ತಪಡಿಸಿ ಹಲವು ಬಿಡ್‌ಗಳು ಸಲ್ಲಿಕೆ ಆದ ಬಳಿಕ ಕಂಪನಿಯನ್ನು ವಿಭಜಿಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿತು.
ಸದ್ಯದ ಮಾರುಕಟ್ಟೆ ದರದ ಪ್ರಕಾರ, ಕೇಂದ್ರ ಸರ್ಕಾರವು ಬಿಇಎಂಎಲ್‌ನ ಶೇ 26ರಷ್ಟು ಷೇರುಗಳನ್ನು ಮಾರಾಟ ಮಾಡಿದರೆ ಸುಮಾರು ₹ 2 ಸಾವಿರ ಕೋಟಿ ಮೊತ್ತ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.