ADVERTISEMENT

ಎಂಎಸ್‌ಪಿಗೆ ಕನಿಷ್ಠ ₹6 ಲಕ್ಷ ಕೋಟಿ ಬೇಕು: ತಜ್ಞರ ಹೇಳಿಕೆ

ಸರ್ಕಾರಕ್ಕೆ ₹21 ಸಾವಿರ ಕೋಟಿಯಷ್ಟೇ ಹೊರೆ: ತಜ್ಞರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 16:25 IST
Last Updated 14 ಫೆಬ್ರುವರಿ 2024, 16:25 IST
<div class="paragraphs"><p>ಹುಬ್ಬಳ್ಳಿಯ ಎಪಿಎಂಸಿ </p></div>

ಹುಬ್ಬಳ್ಳಿಯ ಎಪಿಎಂಸಿ

   

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ನವದೆಹಲಿ: ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಕೃಷಿ ಉತ್ಪನ್ನಗಳ ದರ ಕುಸಿತವಾದರೆ ರೈತರಿಂದ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಗೆ ಕೇಂದ್ರ ಸರ್ಕಾರವು ಸುಮಾರು ₹6 ಲಕ್ಷ ಕೋಟಿಯನ್ನು ಮೀಸಲಿಡಬೇಕಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ADVERTISEMENT

ಆದರೆ, ಎಂಎಸ್‌ಪಿ ಮತ್ತು ಮಂಡಿಗಳಲ್ಲಿ ಇರುವ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ, 2023–24ನೇ ಮಾರುಕಟ್ಟೆ ಋತುವಿನಲ್ಲಿ ಎಂಎಸ್‌ಪಿಯಡಿ ಖರೀದಿಗೆ ಸರ್ಕಾರಕ್ಕೆ ₹21 ಸಾವಿರ ಕೋಟಿಯಷ್ಟು ಹೊರೆಯಾಗುತ್ತದೆ ಎಂದು ಹೇಳಿದ್ದಾರೆ.

‘ಕನಿಷ್ಠ ಬೆಂಬಲ ಬೆಲೆಯಡಿ 23 ಉತ್ಪನ್ನಗಳ ಖರೀದಿಗೆ ಅವಕಾಶವಿದೆ. ಇಷ್ಟು ಉತ್ಪನ್ನಗಳನ್ನು ಖರೀದಿಸಿದರೆ ಸರ್ಕಾರದ ಖಜಾನೆಗೆ ಹೆಚ್ಚಿನ ಹೊರೆಯಾಗುತ್ತದೆ. ಆದರೆ, ವಿವಿಧ ಬೆಳೆಗಳ ಉತ್ಪಾದನೆಗಾಗಿ ರೈತರಿಗೆ ಪ್ರೋತ್ಸಾಹ ನೀಡಲು ಇದರಿಂದ ನೆರವಾಗಲಿದೆ’ ಎಂದು ಕ್ರೆಡಿಟ್ ರೇಟಿಂಗ್‌ ಸಂಸ್ಥೆ‌ ಕ್ರಿಸಿಲ್‌ನ ಸಂಶೋಧನಾ ವಿಭಾಗದ ನಿರ್ದೇಶಕ ಪೂಶನ್ ಶರ್ಮಾ ಹೇಳಿದ್ದಾರೆ.

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರವು ಎಂಎಸ್‌ಪಿ ನಿಗದಿಪಡಿಸುತ್ತದೆ. ಸದ್ಯ 22 ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿದೆ. ಇವುಗಳ ಪೈಕಿ ಭತ್ತ ಮತ್ತು ಗೋಧಿಯನ್ನಷ್ಟೇ ಹೆಚ್ಚಾಗಿ ಖರೀದಿಸುತ್ತದೆ.

ದೇಶದಲ್ಲಿ 2022ರ ಖಾರೀಫ್‌ ಅವಧಿಯಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆಯಡಿ ಶೇ 41ರಷ್ಟು ಭತ್ತ ಖರೀದಿಸಲಾಗಿದೆ. 2023ರ ರಾಬಿ ಅವಧಿಯಲ್ಲಿ ಶೇ 24ರಷ್ಟು ಗೋಧಿ ಹಾಗೂ ಶೇ 9ರಷ್ಟು ಸಾಸಿವೆಯನ್ನು ಖರೀದಿಸಿದೆ. ಉಳಿದಂತೆ 8 ಉತ್ಪನ್ನಗಳ ಬೆಲೆಯು ಎಂಎಸ್‌ಪಿಗಿಂತಲೂ ಹೆಚ್ಚಿದೆ. ಹಾಗಾಗಿ, ಸರ್ಕಾರವು ಅವುಗಳನ್ನು ಖರೀದಿಸಿಲ್ಲ.  ‌

‘ಸರ್ಕಾರವು ಎಲ್ಲಾ ಉತ್ಪನ್ನಗಳಿಗೆ ಎಂಎಸ್‌ಪಿ ಖಾತರಿಪಡಿಸುವುದರಿಂದ ರೈತರು ಭತ್ತ ಮತ್ತು ಗೋಧಿ ಹೊರತುಪಡಿಸಿ ಇತರೆ ಉತ್ಪನ್ನಗಳನ್ನು ಬೆಳೆಯಲು ಉತ್ಸಾಹ ತೋರಬಹುದು’ ಎನ್ನುತ್ತಾರೆ ಪೂಶನ್ ಶರ್ಮಾ.

ಸದ್ಯ ದೆಹಲಿ ಚಲೋ ಹಮ್ಮಿಕೊಂಡಿರುವ ರೈತರು ಕನಿಷ್ಠ ಬೆಂಬಲ ಬೆಲೆ ಕಾನೂನಿನ ಖಾತರಿಗೆ ಪಟ್ಟು ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.