ನವದೆಹಲಿ: ಅಕ್ಕಿ (ಬಾಸ್ಮತಿ ಹೊರತುಪಡಿಸಿ) ಹಾಗೂ ಹತ್ತಿಯ ರಫ್ತಿನ ಮೇಲೆ ಕೇಂದ್ರ ಸರ್ಕಾರವು ತಾತ್ಕಾಲಿಕ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹತ್ತಿಯ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.
‘ಮುಂಗಾರು ಮಳೆ ಹೇಗಿರುತ್ತದೆ ಎಂಬುದನ್ನು ಗಮನಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಉಚಿತ ಆಹಾರಧಾನ್ಯ ವಿತರಣೆ ಯೋಜನೆಯ ಅಡಿಯಲ್ಲಿ ನೀಡುವ ಅಕ್ಕಿ ಮತ್ತು ಗೋಧಿ ಪ್ರಮಾಣದಲ್ಲಿ ಬದಲಾವಣೆ ತಂದ ನಂತರದಲ್ಲಿ ಅಕ್ಕಿಯ ಅಗತ್ಯ ಹೆಚ್ಚಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಈ ವರ್ಷದ ಜೂನ್‌ನಿಂದ ಮುಂದಿನ ವರ್ಷದ ಮಾರ್ಚ್‌ವರೆಗೆ ಕೇಂದ್ರವು ರಾಜ್ಯಗಳಿಗೆ ಗೋಧಿಯ ಪ್ರಮಾಣಕ್ಕಿಂತ 60 ಲಕ್ಷ ಟನ್ ಹೆಚ್ಚು ಅಕ್ಕಿಯನ್ನು ವಿತರಣೆ ಮಾಡಲಿದೆ.
ಹತ್ತಿಯನ್ನು ಬೆಳೆಯುವ ಪ್ರದೇಶ ಕಡಿಮೆ ಆಗಿದೆ ಎಂಬ ಮಾಹಿತಿಯು ಕೇಂದ್ರದ ಬಳಿ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹತ್ತಿಯ ಬೆಲೆಯು ದುಪ್ಪಟ್ಟಾಗಿದೆ. ವರ್ತಕರು ಹಾಗೂ ಹತ್ತಿ ಗಿರಣಿ ಪ್ರತಿನಿಧಿಗಳು ರಫ್ತಿನ ಮೇಲೆ ತಾತ್ಕಾಲಿಕ ನಿರ್ಬಂಧ ಹೇರುವಂತೆ ಕೇಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಅವರ ಸಮಸ್ಯೆಗಳ ಬಗ್ಗೆ ಸರ್ಕಾರವು ಚರ್ಚಿಸುತ್ತಿದೆ. ಕಿರು ಅವಧಿಗೆ ನಿರ್ಬಂಧ ವಿಧಿಸುವುದರಿಂದ ಅವರಿಗೆ ಸಹಾಯ ಆಗುವುದೇ ಎಂಬುದನ್ನು ಪರಿಶೀಲಿಸುತ್ತಿದೆ.
ಆರ್ಥಿಕ ಬೆಳವಣಿಗೆಗೆ ಅಡ್ಡಿ ಆಗದಂತೆ ನೋಡಿಕೊಂಡು, ಹಣದುಬ್ಬರ ಪ್ರಮಾಣವನ್ನು ಕನಿಷ್ಠ ಶೇಕಡ 1ರಷ್ಟು ತಗ್ಗಿಸುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶ. ಇದನ್ನು ಗಮನದಲ್ಲಿ ಇರಿಸಿಕೊಂಡು ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.