ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಬಿಪಿಸಿಎಲ್) ಖಾಸಗೀಕರಣದ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ಹೊಸದಾಗಿ ಅವಲೋಕಿಸುವ, ಮಾರಾಟದ ಷರತ್ತುಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
‘ಬಿಪಿಸಿಎಲ್ ಖಾಸಗೀಕರಣದ ವಿಚಾರವಾಗಿ ನಾವು ಹೊಸದಾಗಿ ಚಿಂತನೆ ನಡೆಸಬೇಕಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಪಿಸಿಎಲ್‌ನಲ್ಲಿ ತಾನು ಹೊಂದಿರುವ ಶೇಕಡ 52.98ರಷ್ಟು ಷೇರುಗಳನ್ನು ಕೇಂದ್ರ ಮಾರಾಟ ಮಾಡುತ್ತಿದೆ. ಬಿಪಿಸಿಎಲ್ ಖರೀದಿಗೆ ವೇದಾಂತ ಸಮೂಹ ಸೇರಿದಂತೆ ಕೆಲವು ಕಂಪನಿಗಳು ಆಸಕ್ತಿ ತೋರಿಸಿವೆ. ಹಣಕಾಸಿನ ಬಿಡ್ ಇನ್ನಷ್ಟೇ ಆಹ್ವಾನಿಸಬೇಕಿದೆ.
ಪರಿಸರ ಪೂರಕ ಹಾಗೂ ನವೀಕರಿಸಬಹುದಾದ ಇಂಧನಗಳ ಕಡೆ ಜಗತ್ತು ಮುಖ ಮಾಡುತ್ತಿರುವಾಗ ಬಿಪಿಸಿಎಲ್ ಖಾಸಗೀಕರಣವು ಈಗಿನ ನಿಯಮಗಳ ಅಡಿಯಲ್ಲಿ ಕಷ್ಟವಾಗುತ್ತದೆ. ಎಷ್ಟು ಷೇರುಪಾಲನ್ನು ಮಾರಾಟ ಮಾಡಬೇಕು ಎಂಬ ಬಗ್ಗೆಯೂ ಆಲೋಚನೆ ನಡೆಸಬೇಕು. ಖಾಸಗಿಯವರು ಒಕ್ಕೂಟ ರಚಿಸಿಕೊಂಡು ಬಿಪಿಸಿಎಲ್ ಖರೀದಿಸಲಿಕ್ಕೆ ಅವಕಾಶ ಆಗುವಂತೆ ನಿಯಮಗಳನ್ನು ಬದಲಾಯಿಸಬೇಕು ಎಂದು ಅಧಿಕಾರಿ ಹೇಳಿದ್ದಾರೆ. ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈಗಿನ ಮಾರುಕಟ್ಟೆ ಮೌಲ್ಯದ ಪ್ರಕಾರ ಬಿಪಿಸಿಎಲ್‌ನಲ್ಲಿ ಕೇಂದ್ರ ಹೊಂದಿರುವ ಷೇರು ಪಾಲಿನ ಮೌಲ್ಯವು ₹ 45 ಸಾವಿರ ಕೋಟಿ ಆಗುತ್ತದೆ.
ಬಿಪಿಸಿಎಲ್ ಖರೀದಿಸಲು ಆಸಕ್ತಿ ತೋರಿಸಿ ವೇದಾಂತ ಸಮೂಹ, ಅಪೋಲೊ ಗ್ಲೋಬಲ್ ಮತ್ತು ಥಿಂಕ್ ಗ್ಯಾಸ್ ಮುಂದೆ ಬಂದಿವೆ. ಬಿಪಿಸಿಎಲ್‌ನ ಆಸ್ತಿಗಳನ್ನು ಖುದ್ದಾಗಿ ಪರಿಶೀಲಿಸಲು ಇವುಗಳಿಗೆ ಅವಕಾಶ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.