ADVERTISEMENT

ತೆರಿಗೆ ವಿವಾದ ಪರಿಹಾರ ಯೋಜನೆ: ವಿವಾದ್ ಸೆ ವಿಶ್ವಾಸ್‌ಗೆ ಅಧಿಸೂಚನೆ ಪ್ರಕಟ

ಅಕ್ಟೋಬರ್‌ 1ರಂದು ಆರಂಭಿಕ ದಿನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 15:20 IST
Last Updated 20 ಸೆಪ್ಟೆಂಬರ್ 2024, 15:20 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ತೆರಿಗೆ ವಿವಾದ ಪರಿಹಾರ ಯೋಜನೆಯ (ವಿವಾದ್‌ ಸೆ ವಿಶ್ವಾಸ್ 2.0) ಆಯ್ಕೆಗೆ ಅಕ್ಟೋಬರ್‌ 1 ಅನ್ನು ಆರಂಭಿಕ ದಿನವಾಗಿ ನಿಗದಿಪಡಿಸಲಾಗಿದೆ. 

2024–25ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಕಟಿಸಿತ್ತು. ಆದಾಯ ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಕೆಲವು ಮೇಲ್ಮನವಿ ಪ್ರಕರಣಗಳನ್ನು ಇದರಡಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ADVERTISEMENT

ವಿವಿಧ ಕಾನೂನು ವೇದಿಕೆಗಳಲ್ಲಿ 2.7 ಕೋಟಿ ನೇರ ತೆರಿಗೆ ವಿವಾದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಇವುಗಳ ಒಟ್ಟು ತೆರಿಗೆ ಮೊತ್ತ ₹35 ಲಕ್ಷ ಕೋಟಿ ಆಗಿದೆ. 

‘ಹಣಕಾಸು ಸಚಿವಾಲಯವು ವಿವಾದ್ ಸೆ ವಿಶ್ವಾಸ್‌ 2.0ಕ್ಕೆ ಸಂಬಂಧಿಸಿದ ನಿಯಮಾವಳಿಗಳು ಮತ್ತು ಸಲ್ಲಿಸಬೇಕಿರುವ ಅರ್ಜಿ ನಮೂನೆಗಳನ್ನು ಮುಂದಿನ ವಾರ ಪ್ರಕಟಿಸುವ ನಿರೀಕ್ಷೆಯಿದೆ’ ಎಂದು ಡೆಲಾಯ್ಟ್‌ ಇಂಡಿಯಾದ ‍ಪಾಲುದಾರ ಆರ್‌. ಫಾಟರ್‌ಫೇರ್ಕರ್‌ ತಿಳಿಸಿದ್ದಾರೆ.

‘ಯೋಜನೆಯ ಆಯ್ಕೆಗೆ ಕಡಿಮೆ ಕಾಲಾವಧಿ ಇರುತ್ತದೆ. ಅರ್ಹರು ತ್ವರಿತವಾಗಿ ಇದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ’ ಎಂದು ಹೇಳಿದ್ದಾರೆ.

2020ರಲ್ಲಿ ಮೊದಲ ಬಾರಿಗೆ ಕೇಂದ್ರವು ಈ ಯೋಜನೆಯನ್ನು ಜಾರಿಗೊಳಿಸಿತ್ತು. ಒಂದು ಲಕ್ಷ ತೆರಿಗೆದಾರರು ಇದರ ಪ್ರಯೋಜನ ಪಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ₹75 ಸಾವಿರ ಕೋಟಿ ಪಾವತಿಯಾಗಿದೆ.

ಯಾವ ತೆರಿಗೆದಾರರು ಅರ್ಹ?

ಪ್ರಸಕ್ತ ವರ್ಷದ ಜುಲೈ 22ಕ್ಕೂ ಮುಂಚೆ ಬಾಕಿ ಉಳಿದಿರುವ ಮೇಲ್ಮನವಿ ಪ್ರಕರಣಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಆಯುಕ್ತರು ಮತ್ತು ಜಂಟಿ ಆಯುಕ್ತರಿಗೆ ಸಲ್ಲಿಸಿರುವ ಮೇಲ್ಮನವಿ ವಿಶೇಷ ಮೇಲ್ಮನವಿಗಳನ್ನು ಇದರಡಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ. 2021–22ನೇ ಸಾಲಿನ ಬಜೆಟ್‌ನಲ್ಲಿ ವಿವಾದ ಪರಿಹಾರ ಸಮಿತಿಯನ್ನು (ಡಿಆರ್‌ಸಿ) ಘೋಷಿಸಲಾಗಿತ್ತು. ಇದರ ಮುಂದೆ ಬಾಕಿ ಇರುವ ಪ್ರಕರಣಗಳು ಮತ್ತು ಆದಾಯ ತೆರಿಗೆ ಆಯುಕ್ತರಿಗೆ ಸಲ್ಲಿಸಿರುವ ಪರಿಷ್ಕೃತ ಅರ್ಜಿಗಳಿಗೆ ಯೋಜನೆಯು ಅನ್ವಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.