ನವದೆಹಲಿ: ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಿಸುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.
ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ‘ಜನ ಪೋಷಣ ಕೇಂದ್ರ’ದ ಹೆಸರಿನಡಿ 60 ಪಡಿತರ ಅಂಗಡಿಗಳಿಗೆ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದ್ದಾರೆ.
ಜನರಿಗೆ ಪೋಷಕಾಂಶಗಳ ಖಾತರಿ ನೀಡುವುದು ಈ ನವೀಕೃತ ಕೇಂದ್ರಗಳ ಗುರಿಯಾಗಿದೆ. ಅಲ್ಲದೆ, ಎಲ್ಲರಿಗೂ ಪೌಷ್ಟಿಕಾಂಶಯುಕ್ತ ಆಹಾರ ದೊರೆಯುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
ಸದ್ಯ ಪಡಿತರ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಗ್ರಾಹಕರಿಗೆ ಆಹಾರ ಧಾನ್ಯ ವಿತರಿಸಲಾಗುತ್ತದೆ. ಇನ್ನು ಮುಂದೆ ಈ ಕೇಂದ್ರಗಳಲ್ಲಿ ಸಿರಿಧಾನ್ಯ, ಬೇಳೆಕಾಳು, ಹೈನುಗಾರಿಕೆ ಉತ್ಪನ್ನಗಳು ಸೇರಿ ದೈನಂದಿನ ಅಗತ್ಯ ಆಹಾರ ಪದಾರ್ಥಗಳು ದೊರೆಯಲಿವೆ. ಇದರಿಂದ ಪಡಿತರ ವಿತರಕರ ಆದಾಯವೂ ಹೆಚ್ಚಲಿದೆ.
ಸಚಿವರ ಅಸಮಾಧಾನ:
‘ಕೆಲವು ಪ್ರದೇಶದಲ್ಲಿ ಪಡಿತರ ಅಂಗಡಿಗಳು 8ರಿಂದ 9 ದಿನಗಳು ತೆರೆದಿರುತ್ತವೆ. ಕೆಲವು ವಿತರಕರು ಮೂರು ತಿಂಗಳಿಗೊಮ್ಮೆ ತೆರೆಯುತ್ತಾರೆ. ಉಳಿದ ಅವಧಿಯಲ್ಲಿ ಈ ಅಂಗಡಿಗಳು ಮುಚ್ಚಿರುತ್ತವೆ’ ಎಂದು ಪಡಿತರ ಅಂಗಡಿಗಳ ಕಾರ್ಯವೈಖರಿ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ನೀಡುತ್ತಿರುವ ಕಮಿಷನ್ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸಾಲುತ್ತಿಲ್ಲ. ಹಾಗಾಗಿ, ಪೌಷ್ಟಿಕ ಆಹಾರ ಪದಾರ್ಥಗಳ ಮಾರಾಟಕ್ಕಾಗಿ ಅಂಗಡಿಯ ಜಾಗ ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಆ್ಯಪ್ ಬಿಡುಗಡೆ:
‘ಒಂದು ರಾಷ್ಟ್ರ; ಒಂದು ಪಡಿತರ ಚೀಟಿ’ ವ್ಯವಸ್ಥೆಯನ್ನು ಬಲಗೊಳಿಸಲು ಕೇಂದ್ರ ಸರ್ಕಾರವು ‘ಮೇರಾ ರೇಷನ್’ ಆ್ಯಪ್ ಅನ್ನು ಬಿಡುಗಡೆಗೊಳಿಸಿತ್ತು. ಈ ಆ್ಯಪ್‌ನ ಹೊಸ ಆವೃತ್ತಿ ಹಾಗೂ ಭಾರತೀಯ ಆಹಾರ ನಿಗಮದ ಸಾಮಾನ್ಯ ಕೈಪಿಡಿಯನ್ನು ಸಚಿವರು ಬಿಡುಗಡೆಗೊಳಿಸಿದರು.
ಪಡಿತರ ವಿತರಕರಿಗೆ ಸಾಲ ಸೌಲಭ್ಯ
ಪಡಿತರ ವಿತರಕರಿಗೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ಐಡಿಬಿಐ) ಮೂಲಕ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಜೊತೆಗೆ ಕೇಂದ್ರ ಕೌಶಲ ಅಭಿವೃದ್ಧಿ ಸಚಿವಾಲಯದ ಮೂಲಕ ಉದ್ಯಮಶೀಲತೆ ಬಗ್ಗೆ ತರಬೇತಿ ನೀಡಲಾಗುವುದು ಎಂದು ಕೇಂದ್ರ ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ. ಪೌಷ್ಟಿಕ ಆಹಾರ ಪದಾರ್ಥ ವಿತರಿಸುವ ಪ್ರಾಯೋಗಿಕ ಯೋಜನೆಯು ಹಂತ ಹಂತವಾಗಿ 5.38 ಲಕ್ಷ ಅಂಗಡಿಗಳಿಗೆ ವಿಸ್ತರಣೆಯಾಗಲಿದೆ. ಬಳಿಕ ದೇಶದಾದ್ಯಂತ ಇರುವ ಪಡಿತರ ಅಂಗಡಿಗಳಿಗೆ ವಿಸ್ತರಿಸಲು ಸರ್ಕಾರ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.