ADVERTISEMENT

ಎಫ್‌ಸಿಐಗೆ 21 ಸಾವಿರ ಕೋಟಿ ಬಂಡವಾಳ ನಿಗದಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 15:48 IST
Last Updated 17 ಫೆಬ್ರುವರಿ 2024, 15:48 IST
   

ನವದೆಹಲಿ (ಪಿಟಿಐ): ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು, ನಿಗಮದ ಅಧಿಕೃತ ಬಂಡವಾಳವನ್ನು ₹10 ಸಾವಿರ ಕೋಟಿಯಿಂದ ₹21 ಕೋಟಿ ಸಾವಿರಕ್ಕೆ ಹೆಚ್ಚಿಸಿದೆ ಎಂದು ಕೇಂದ್ರ ಆಹಾರ ಸಚಿವಾಲಯವು ಶನಿವಾರ ತಿಳಿಸಿದೆ. 

ಆಹಾರ ನಿಗಮವು ರೈತರಿಂದ ಕನಿಷ್ಠ ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಕೇಂದ್ರದ ಪ್ರಮುಖ ನೋಡೆಲ್‌ ಏಜೆನ್ಸಿಯಾಗಿದೆ. ಅಲ್ಲದೇ, ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳಡಿ ವಿತರಿಸುವ ಆಹಾರ ಧಾನ್ಯಗಳನ್ನು ದಾಸ್ತಾನು ಮಾಡುತ್ತದೆ.

ಇದರ ವೆಚ್ಚದ ನಿರ್ವಹಣೆಗಾಗಿ ನಿಗಮವು ಸಾಲಕ್ಕಾಗಿ ಬ್ಯಾಂಕ್‌ಗಳ ಮೊರೆ ಹೋಗುತ್ತದೆ. ಈಗ ಬಂಡವಾಳ ಮೊತ್ತ ಹೆಚ್ಚಿಸಿರುವುದು ನಿಗಮದ ಕಾರ್ಯ ಚಟುವಟಿಕೆಗಳು ಸುಗಮವಾಗಿ ಸಾಗಲು ಸಹಕಾರಿಯಾಗಲಿದೆ ಎಂದು ಸಚಿವಾಲಯ ಹೇಳಿದೆ.

ADVERTISEMENT

ಬಂಡವಾಳ ಹೆಚ್ಚಿಸಿರುವುದರಿಂದ ನಿಗಮದ ಸಾಲದ ಬಡ್ಡಿ ಹೊರೆಯೂ ತಗ್ಗಲಿದೆ. ಆರ್ಥಿಕ ವೆಚ್ಚ ಕೂಡ ಕಡಿಮೆಯಾಗಲಿದೆ. ಅಲ್ಲದೇ ಆಧುನಿಕ ದಾಸ್ತಾನು ಸೌಲಭ್ಯ, ತಂತ್ರಜ್ಞಾನ ಅಳವಡಿಕೆ, ಸಾಗಣೆ ಜಾಲದ ಸುಧಾರಣೆ ಹಾಗೂ  ಶೈತ್ಯಾಗಾರಗಳನ್ನು ಮೇಲ್ದರ್ಜೆಗೇರಿಸಲು ಸಹಕಾರಿಯಾಗಲಿದೆ. ಸಮರ್ಪಕವಾಗಿ ಗ್ರಾಹಕರಿಗೆ ಆಹಾರ ಧಾನ್ಯಗಳ ವಿತರಣೆಗೆ ಅನುಕೂಲವಾಗಲಿದೆ ಎಂದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.