ನವದೆಹಲಿ: ಪ್ರಸಕ್ತ ಸಾಲಿನ ಮುಂಗಾರು ಬೆಳೆಯಾಗಿ ಬೆಳೆದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದ್ದು, ಪ್ರತಿ ಕ್ವಿಂಟಾಲ್‌ಗೆ ಶೇ 5.35ರಂತೆ ₹2,300ಕ್ಕೆ ಬುಧವಾರ ಹೆಚ್ಚಿಸಿದೆ. ಇದರಂತೆ ಇತರ 13 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನೂ ಸರ್ಕಾರ ಹೆಚ್ಚಿಸಿದೆ.
ಸರ್ಕಾರಿ ಗೋದಾಮಿನಲ್ಲಿ ಅಕ್ಕಿಯ ದಾಸ್ತಾನು ಸಾಕಷ್ಟು ಇರುವಾಗಲೇ, ಭತ್ತಕ್ಕೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ₹117ರಷ್ಟು ಹೆಚ್ಚಳ ಮಾಡಿರುವುದರ ಹಿಂದೆ ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯ ಲೆಕ್ಕಾಚಾರವಿದೆ ಎಂದು ಅಂದಾಜಿಸಲಾಗಿದೆ.
‘ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಮೊದಲ ನಿರ್ಧಾರವಾಗಿ, ಬೆಂಬಲ ಬೆಲೆಯು ಒಟ್ಟು ಉತ್ಪಾದನಾ ವೆಚ್ಚಕ್ಕಿಂತ ಶೇ 1.5ರಷ್ಟು ಇರಬೇಕು ಎಂಬ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಕಳೆದ ಸಾಲಿಗೆ ಹೋಲಿಸಿದಲ್ಲಿ ₹35 ಸಾವಿರ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಹೀಗಾಗಿ ಇದರ ಒಟ್ಟು ಮೊತ್ತ ₹2ಲಕ್ಷ ಕೋಟಿಯಾಗಿದೆ’ ಎಂದು ಮಾಹಿತಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬೆಳೆವಾರು ಬೆಂಬಲ ಬೆಲೆ ಮಾಹಿತಿ...
ಭತ್ತ: ಸಾಮಾನ್ಯ ಶ್ರೇಣಿಗೆ ₹117ರಷ್ಟು ಹೆಚ್ಚಳ (ಕ್ವಿಂಟಾಲ್‌ಗೆ ₹2,300), ಎ ಶ್ರೇಣಿ– ₹2,320
ಹೈಬ್ರೀಡ್ ಜೋಳ: ₹191ರಷ್ಟು ಹೆಚ್ಚಳ (ಕ್ವಿಂಟಾಲ್‌ಗೆ ₹3,371)
ಮಾಲ್ದಾನಿ: ₹196ರಷ್ಟು ಹೆಚ್ಚಳ (ಕ್ವಿಂಟಾಲ್‌ಗೆ 3,421)
ಹತ್ತಿ: ಪ್ರತಿ ಕ್ವಿಂಟಲ್ ಸಾಮಾನ್ಯ ತಳಿಯ ಹತ್ತಿಗೆ ನೀಡುವ ಎಂಎಸ್‌ಪಿಯನ್ನು ₹7,121ಕ್ಕೆ ಹಾಗೂ ಮತ್ತೊಂದು ತಳಿ ಹತ್ತಿ ಎಂಎಸ್‌ಪಿಯನ್ನು ₹7,521ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಹತ್ತಿಗೆ ನೀಡುವ ಎಂಎಸ್‌ಪಿಯನ್ನು ಕಳೆದ ಬಾರಿಗಿಂತ ₹510 ರಷ್ಟು ಹೆಚ್ಚಿಸಿದಂತಾಗಿದೆ.
ರಾಗಿ– ₹4,290, ಸಜ್ಜೆ– ₹2,625 ಹಾಗೂ ಮೆಕ್ಕೆಜೋಳಕ್ಕೆ ₹2,225 ಎಂಎಸ್‌ಪಿ ನಿಗದಿ ಮಾಡಲಾಗಿದೆ.
ಬೇಳೆಕಾಳುಗಳಿಗೆ ನೀಡುವ ಎಂಎಸ್‌ಪಿಯನ್ನು ಸಹ ಹೆಚ್ಚಿಸಲಾಗಿದೆ. ಹೆಸರು ಕಾಳಿಗೆ ₹8,682 ನಿಗದಿ ಮಾಡಲಾಗಿದ್ದರೆ, ತೊಗರಿ–₹7,550 ಹಾಗೂ ಉದ್ದಿಗೆ ₹7,400 ನಿಗದಿ ಮಾಡಲಾಗಿದೆ. ಪ್ರತಿ ಕ್ವಿಂಟಲ್‌ಗೆ ಕಳೆದ ವರ್ಷ ನಿಗದಿ ಮಾಡಿದ್ದ ದರಕ್ಕಿಂತ ₹550 ಹೆಚ್ಚಳ ಮಾಡಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.