ADVERTISEMENT

ಆಹಾರ: ಚಿಲ್ಲರೆ ವಹಿವಾಟು ಪ್ರಸ್ತಾವ ತಿರಸ್ಕಾರ

ಫ್ಲಿಪ್‌ಕಾರ್ಟ್‌ ಮನವಿ ತಳ್ಳಿಹಾಕಿದ ಕೇಂದ್ರ ಸರ್ಕಾರ

ಪಿಟಿಐ
Published 1 ಜೂನ್ 2020, 19:30 IST
Last Updated 1 ಜೂನ್ 2020, 19:30 IST
   

ನವದೆಹಲಿ: ಆಹಾರಚಿಲ್ಲರೆ ವಹಿವಾಟಿನ ಕ್ಷೇತ್ರ ಪ್ರವೇಶಿಸಲು ಅವಕಾಶ ನೀಡಬೇಕೆಂಬ ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ನ ಪ್ರಸ್ತಾವವನ್ನು ಉದ್ದಿಮೆ ಉತ್ತೇಜನೆ ಮತ್ತು ಆಂತರಿಕ ವ್ಯಾಪಾರ ಇಲಾಖೆಯು ತಿರಸ್ಕರಿಸಿದೆ.

ದೇಶದಲ್ಲಿ ಆಹಾರ ಉತ್ಪನ್ನಗಳ ಚಿಲ್ಲರೆ ವಹಿವಾಟು ಆರಂಭಿಸುವ ಉದ್ದೇಶದಿಂದ ಕಂಪನಿಯು ಹಿಂದಿನ ವರ್ಷವೇ ಫ್ಲಿಪ್‌ಕಾರ್ಟ್‌ ಫಾರ್ಮರ್‌ಮಾರ್ಟ್‌ ಹೆಸರಿನ ಅಂಗ ಸಂಸ್ಥೆ ಆರಂಭಿಸಿತ್ತು. ಅದರ ಮೂಲಕವೇ ರಿಟೇಲ್‌ ಫುಡ್‌ ವಲಯದಲ್ಲಿ ವಹಿವಾಟು ನಡೆಸಲು ಲೈಸನ್ಸ್‌ಗೆ ಮನವಿ ಸಲ್ಲಿಸಿತ್ತು.

‘ದೇಶಿ ಕೃಷಿ ಕ್ಷೇತ್ರ ಮತ್ತು ಆಹಾರ ಸಂಸ್ಕರಣಾ ಉದ್ದಿಮೆಗೆ ಚೇತರಿಕೆ ನೀಡುವುದು ಕಂಪನಿಯ ಉದ್ದೇಶವಾಗಿದೆ’ ಎಂದು ಫ್ಲಿಪ್‌ಕಾರ್ಟ್‌ ಗ್ರೂಪ್‌ನ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಅವರು ಆ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

ADVERTISEMENT

ದೇಶದಲ್ಲಿ ಆಹಾರ ಉತ್ಪಾದನೆ ಮತ್ತು ತಯಾರಿಕೆ ಕ್ಷೇತ್ರಗಳಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸರ್ಕಾರ ಅನುಮತಿ ನೀಡಿದ್ದರೂ, ಫ್ಲಿಪ್‌ಕಾರ್ಟ್‌ನ ವಹಿವಾಟಿಗೆ ನಿಯಂತ್ರಣ ವಿಷಯದ ಕಾರಣಕ್ಕೆ ಅನುಮತಿ ನಿರಾಕರಿಸಲಾಗಿದೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಫ್ಲಿಪ್‌ಕಾರ್ಟ್ ವಕ್ತಾರರು, ಅನುಮತಿ ಕೋರಿ ಮತ್ತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹೊಸತನ ಅಳವಡಿಸಿಕೊಂಡ ಮಾರುಕಟ್ಟೆ ಮತ್ತು ತಂತ್ರಜ್ಞಾನ ಜತೆಗೂಡಿದರೆ ಕೃಷಿಕರು ಮತ್ತು ಆಹಾರ ಸಂಸ್ಕರಣಾ ವಲಯಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಕೃಷಿ ಉತ್ಪಾದನೆಯಲ್ಲಿ ದಕ್ಷತೆ ಹೆಚ್ಚಳ ಮತ್ತು ಪಾರದರ್ಶಕ ವಹಿವಾಟಿನಿಂದಾಗಿ ರೈತರ ವರಮಾನ ಹೆಚ್ಚಲಿದೆ. ದೇಶಿ ಕೃಷಿ ಕ್ಷೇತ್ರವು ಗಮನಾರ್ಹವಾಗಿ ಬದಲಾಗಲಿದೆ ಎಂದು ಕಂಪನಿ ಹೇಳಿಕೊಂಡಿತ್ತು.

ಇಲ್ಲಿ ಇನ್ನೊಂದು ಆಸಕ್ತಿದಾಯಕ ಸಂಗತಿ ಏನೆಂದರೆ, ಆಹಾರ ಉತ್ಪನ್ನಗಳ ರಿಟೇಲ್‌ ವಹಿವಾಟಿನಲ್ಲಿ ₹ 3,750‬ ಕೋಟಿ ಮೊತ್ತದ ಬಂಡವಾಳ ತೊಡಗಿಸುವ ಅಮೆಜಾನ್‌ ಪ್ರಸ್ತಾವಕ್ಕೆ ಸರ್ಕಾರ 2017ರಲ್ಲಿಯೇ ಅನುಮತಿ ನೀಡಿದೆ.

ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ದಿನಸಿ ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಂಡಿದೆ. ಮುಂಬರುವ ದಿನಗಳಲ್ಲಿಯೂ ದಿನಸಿ ವಹಿವಾಟು ಏರುಗತಿಯಲ್ಲಿ ಇರಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

₹15 ಲಕ್ಷ ಕೋಟಿ: ಅಸಂಘಟಿತ ರಿಟೇಲ್‌ ವಲಯದಲ್ಲಿನ ದಿನಸಿ ಮಾರುಕಟ್ಟೆಯ ಗಾತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.