ನವದೆಹಲಿ: ವಿವಿಧ ವೃತ್ತಿಗಳಿಗೆ ಸಂಬಂಧಿಸಿದಂತೆ ಯುವಜನರಿಗೆ ತರಬೇತಿ ಅವಕಾಶ ಒದಗಿಸುವ ಬಗ್ಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದ್ದ ‘ಪಿಎಂ ಇಂಟರ್ನ್‌ಶಿಪ್ ಯೋಜನೆ’ಗೆ ಡಿಸೆಂಬರ್ 2ರಿಂದ ಚಾಲನೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಮುಂದಿನ ಐದು ವರ್ಷದ ಅವಧಿಯಲ್ಲಿ ದೇಶದ ಒಂದು ಕೋಟಿ ಯುವಜನರಿಗೆ ಪ್ರಮುಖ 500 ಕಂಪನಿಗಳಲ್ಲಿ ಉದ್ಯೋಗದ ಬಗ್ಗೆ ತರಬೇತಿ ನೀಡುವುದು ಯೋಜನೆಯಡಿ ಗುರಿ ಹೊಂದಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ₹66 ಸಾವಿರ ಭತ್ಯೆ ಸಿಗಲಿದೆ.
‘2024-25ನೇ ಆರ್ಥಿಕ ವರ್ಷದಲ್ಲಿ ಸರ್ಕಾರವು ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. 1.25 ಲಕ್ಷ ಯುವಜನರಿಗೆ ತರಬೇತಿ ನೀಡಲಾಗುವುದು’ ಎಂದು ಗುರುವಾರ ಸರ್ಕಾರದ ಮೂಲಗಳು ತಿಳಿಸಿವೆ.
ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ಅಭಿವೃದ್ಧಿಪಡಿಸಿರುವ ಪೋರ್ಟಲ್ ಮೂಲಕ ಯೋಜನೆಯು ಅನುಷ್ಠಾನಗೊಳ್ಳಲಿದೆ. ಪೋರ್ಟಲ್ ಮೂಲಕ ಅಭ್ಯರ್ಥಿಗಳು ಅಕ್ಟೋಬರ್ ಎರಡನೇ ವಾರದಿಂದ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿವೆ.
ಸರ್ಕಾರದ ಜೊತೆಗಿನ ಪಾಲುದಾರ ಕಂಪನಿಗಳು ತರಬೇತಿ ನೀಡುತ್ತವೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್) ಹಂಚಿಕೆ ಮಾಡಿರುವ ಆಧಾರದ ಮೇಲೆ ಈ ಕಂಪನಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ವಿವರಿಸಿವೆ.
ಸ್ವಯಂಪ್ರೇರಿತವಾಗಿ ಯೋಜನೆಯಡಿ ಪಾಲ್ಗೊಳ್ಳುವ ಕಂಪನಿಗಳು 12 ತಿಂಗಳು ತರಬೇತಿ ನೀಡಬೇಕಿದೆ. ಸಚಿವಾಲಯದ ಒಪ್ಪಿಗೆ ಮೇರೆಗೆ ಇತರೆ ಕಂಪನಿ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಕೂಡ ಯೋಜನೆಯಡಿ ಭಾಗವಹಿಸಲು ಅವಕಾಶವಿದೆ. ವಿವಿಧ ವಲಯಗಳ ಆಧಾರದ ಮೇಲೆ ಕಂಪನಿಗಳನ್ನು ಗುರುತಿಸಿ ಆಯ್ಕೆ ಮಾಡಲಾಗುತ್ತದೆ.
ಕಂಪನಿಗಳು ಇಂಟರ್ನ್‌ಶಿಪ್ ಬಗೆಗಿನ ಮಾಹಿತಿ, ಸ್ಥಳದ ವಿವರ, ತರಬೇತಿಯ ಸ್ವರೂಪ, ವಿದ್ಯಾರ್ಹತೆ ಸೇರಿ ಇತರೆ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಅಭ್ಯರ್ಥಿಗಳು ತಮಗೆ ಆಸಕ್ತಿ ಇರುವ ವಲಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
21 ವರ್ಷದಿಂದ 24 ವರ್ಷದ ಒಳಗಿನ ಯುವಜನರು ಅರ್ಹರಾಗಿದ್ದಾರೆ. ಆನ್‌ಲೈನ್ ಅಥವಾ ದೂರಶಿಕ್ಷಣದ ಮೂಲಕ ಶಿಕ್ಷಣ ಪಡೆದವರು ಕೂಡ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ.
ಎಸ್‌ಎಸ್ಎಲ್‌ಸಿ ಪಿಯುಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಐಟಿಐ ಡಿಪ್ಲೊಮಾ ಕೋರ್ಸ್ ಓದಿದವರು ಅರ್ಹರಾಗಿದ್ದಾರೆ. ಬಿಎ ಬಿಎಸ್‌ಸಿ ಬಿಕಾಂ ಬಿಸಿಎ ಬಿಬಿಎ ಮತ್ತು ಬಿ.ಫಾರ್ಮಾ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ₹ 5 ಸಾವಿರ ಮಾಸಿಕ ಭತ್ಯೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ₹ 5 ಸಾವಿರ ಭತ್ಯೆ ಸಿಗಲಿದೆ. ಸರ್ಕಾರವು ₹ 4500 ಭರಿಸಿದರೆ ಕಂಪನಿಯು ಸಿಎಸ್ಆರ್ ನಿಧಿಯಡಿ ₹ 500 ಇಂಟರ್ನ್‌ಶಿಪ್ ಭತ್ಯೆ ಪಾವತಿಸಲಿದೆ. ಇದರೊಟ್ಟಿಗೆ ಸಚಿವಾಲಯದಿಂದ ಒಂದು ಬಾರಿ ಪ್ರತಿ ಅಭ್ಯರ್ಥಿಗೆ ₹ 6000 ಧನಸಹಾಯ ನೀಡಲಾಗುತ್ತದೆ. ಕಂಪನಿಗಳು ಸಿಎಸ್‌ಆರ್ ನಿಧಿಯಿಂದ ತರಬೇತಿ ವೆಚ್ಚವನ್ನು ಭರಿಸಲಿದೆ. ವಿಮಾ ಸೌಲಭ್ಯ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪಿಎಂ ಸುರಕ್ಷಾ ಬಿಮಾ ಯೋಜನೆಯಡಿ ವಿಮಾ ಸೌಲಭ್ಯ ಕಲ್ಪಿಸಲಾಗುತ್ತದೆ. ಸರ್ಕಾರವೇ ಈ ವಿಮಾ ಪ್ರೀಮಿಯಂ ಮೊತ್ತವನ್ನು ಪಾವತಿಸಲಿದೆ.
ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ₹5 ಸಾವಿರ ಭತ್ಯೆ ಸಿಗಲಿದೆ. ಸರ್ಕಾರವು ₹4,500 ಭರಿಸಿದರೆ, ಕಂಪನಿಯು ಸಿಎಸ್ಆರ್ ನಿಧಿಯಡಿ ₹500 ಇಂಟರ್ನ್‌ಶಿಪ್ ಭತ್ಯೆ ಪಾವತಿಸಲಿದೆ. ಇದರೊಟ್ಟಿಗೆ ಸರ್ಕಾರದಿಂದ ಒಂದು ಬಾರಿ ಪ್ರತಿ ಅಭ್ಯರ್ಥಿಗೆ ₹6,000 ಧನಸಹಾಯ ನೀಡಲಾಗುತ್ತದೆ. ಕಂಪನಿಗಳು ಸಿಎಸ್‌ಆರ್ ನಿಧಿಯಿಂದ ತರಬೇತಿ ವೆಚ್ಚವನ್ನು ಭರಿಸಲಿದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪಿಎಂ ಸುರಕ್ಷಾ ಬಿಮಾ ಯೋಜನೆಯಡಿ ವಿಮಾ ಸೌಲಭ್ಯ ಕಲ್ಪಿಸಲಾಗುತ್ತದೆ. ಸರ್ಕಾರವೇ ಈ ವಿಮಾ ಪ್ರೀಮಿಯಂ ಮೊತ್ತವನ್ನು ಪಾವತಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.