ನವದೆಹಲಿ: ಅಡುಗೆ ಎಣ್ಣೆ ದಾಸ್ತಾನು ಸಾಕಷ್ಟಿದೆ. ಹಾಗಾಗಿ, ಚಿಲ್ಲರೆ ದರ ಏರಿಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ನೀಡಿದ್ದ ನಿರ್ದೇಶನವನ್ನು ಉಲ್ಲಂಘಿಸಿರುವ ಖಾದ್ಯ ತೈಲ ತಯಾರಿಕಾ ಕಂಪನಿಗಳು ಬೆಲೆ ಹೆಚ್ಚಿಸಿವೆ.
ಈ ಕುರಿತು ವಿವರಣೆ ನೀಡುವಂತೆ ಕಂಪನಿಗಳಿಗೆ ಕೇಂದ್ರವು ಶುಕ್ರವಾರ ಸೂಚಿಸಿದೆ.
ದೇಶೀಯ ಎಣ್ಣೆಕಾಳು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಚ್ಚಾ ಮತ್ತು ಸಂಸ್ಕೃರಿಸಿದ ತಾಳೆ, ಸೂರ್ಯಕಾಂತಿ ಮತ್ತು ಸೋಯಾಬಿನ್ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸರ್ಕಾರ ಹೆಚ್ಚಿಸಿತ್ತು. ಕಂಪನಿಗಳೊಂದಿಗೆ ಆಹಾರ ಸಚಿವಾಲಯದ ಕಾರ್ಯದರ್ಶಿ ನಡೆಸಿದ ಸಭೆಯಲ್ಲಿ ಚಿಲ್ಲರೆ ದರ ಹೆಚ್ಚಳ ಮಾಡುವುದಿಲ್ಲ ಎಂದು ಕಂಪನಿಗಳು ಹೇಳಿಕೆ ನೀಡಿದ್ದವು.
‘ಹಬ್ಬದ ಋತುವಿನಲ್ಲಿ ದರ ಏರಿಕೆ ಮಾಡದಂತೆ ಸರ್ಕಾರದ ನಿರ್ದೇಶನವಿದ್ದರೂ ಆಮದು ಸುಂಕ ಹೆಚ್ಚಳದ ದಿನದಿಂದಲೇ ಬೆಲೆ ಹೆಚ್ಚಿಸಿವೆ. ಇದಕ್ಕೆ ಇರುವ ಕಾರಣ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ’ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಡಿಮೆ ಕಸ್ಟಮ್ಸ್ ಸುಂಕ ಜಾರಿಯಲ್ಲಿದ್ದ ವೇಳೆ ಆಮದು ಮಾಡಿಕೊಂಡಿರುವ 30 ಲಕ್ಷ ಟನ್‌ನಷ್ಟು ಖಾದ್ಯ ತೈಲ ದಾಸ್ತಾನಿದೆ. ಇದು 45ರಿಂದ 50 ದಿನದ ವರೆಗೆ ದೇಶೀಯ ಬಳಕೆಗೆ ಸಾಕಾಗಲಿದೆ. ಹಾಗಾಗಿ, ಚಿಲ್ಲರೆ ಮಾರಾಟ ದರ ಏರಿಕೆ ಮಾಡಬಾರದೆಂದು ಸರ್ಕಾರವು ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.